Advertisement

ಜರುವತ್ತು ರಸ್ತೆ ಬದಿ ತ್ಯಾಜ್ಯ ರಾಶಿ; ರೋಗ ಭೀತಿ

12:36 AM Jul 02, 2019 | Sriram |

ಹೆಬ್ರಿ: ಕಾರ್ಕಳದಿಂದ ಹೆಬ್ರಿ ಮಾರ್ಗದ ಜರುವತ್ತು ಬಳಿ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯ ಲಾಗಿದ್ದು, ಮಳೆಗಾಲದಲ್ಲಿ ಇವುಗಳು ಕೊಳೆತು ಸಾಂಕ್ರಾಮಿಕ ರೋಗಭೀತಿ ಕಾಡಿದೆ.

Advertisement

ಹೆಬ್ರಿ ಗ್ರಾ.ಪಂ. ವ್ಯಾಪ್ತಿಯ ಜರುವತ್ತು ಹೊಳೆಗೆ ಕೋಳಿ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದ್ದು ನೀರು ಕಲುಷಿತಗೊಳ್ಳುತ್ತಿದೆ. ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಹಿಂದೂ ರುದ್ರಭೂಮಿ ಸಮೀಪ ಎಸೆದ ಕಸದ ರಾಶಿಯಲ್ಲಿ ಕೊಳೆತ ತ್ಯಾಜ್ಯಗಳು, ಪ್ಲಾಸ್ಟಿಕ್‌, ಬಾಟಲಿಗಳಿದ್ದು, ಇವುಗಳನ್ನು ತಿಂದು ಹಸುಗಳು ಸಾವನ್ನಪ್ಪಿದ ಘಟನೆಗಳಿವೆ.

ಮಳೆಗಾಲವಾದ್ದರಿಂದ ತ್ಯಾಜ್ಯಗಳು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿದ್ದು, ಪರಿಸರದಲ್ಲಿ ದುರ್ನಾತ, ಸೊಳ್ಳೆ ಕಾಟ ಹೆಚ್ಚಿದೆ. ಜತೆಗೆ ರೋಗಭೀತಿಯೂ ಕಾಣಿಸಿಕೊಂಡಿದೆ. ತ್ಯಾಜ್ಯಗಳು ನೀರಿಗೂ ಸೇರಿ ಕಲುಷಿತಗೊಳ್ಳುತ್ತಿದೆ.

ಜರುವತ್ತು ಸೇತುವೆ ಮುಂದೆ ಎಡಭಾಗದಲ್ಲಿ ಸ್ವಚ್ಛತೆ ಕಾಪಾಡಿ ಎಂಬ ನಾಮ ಫಲಕವನ್ನು ಹಾಕಲಾಗಿದ್ದರೂ ಅದರ ಬುಡದಲ್ಲೇ ಕಸದ ರಾಶಿ ಇದೆ. ಇಲ್ಲಿ ದುರ್ನಾತ ಹಬ್ಬಿದ್ದು ಕೂಡಲೇ ಆಡಳಿತ ತ್ಯಾಜ್ಯ ವಿಲೇವಾರಿ ಮಾಡುವಂತೆ, ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಹೇಳಿದ್ದಾರೆ. ಸ್ವಚ್ಛತೆ ಬಗ್ಗೆ ಸಾಕಷ್ಟು ಆಂದೋಲನಗಳಾಗುತ್ತಿದ್ದರೂ ಕಸ ಹಾಕುವುದು ಎಗ್ಗಿಲ್ಲದೆ ನಡೆದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಪೈ.

ಕಾನೂನು ಕ್ರಮ

ಹೆಬ್ರಿ ಗ್ರಾಮದವರು ಕೋಳಿ ತ್ಯಾಜ್ಯವನ್ನು ಜರುವತ್ತು ಬಳಿ ಈ ಮೊದಲು ಎಸೆಯುತ್ತಿದ್ದು ಈಗ 8 ಕೋಳಿ ಅಂಗಡಿಯವರು ಶಿವಪುರದಲ್ಲಿ ನಿರ್ಮಾಣವಾದ ಕೋಳಿ ತ್ಯಾಜ್ಯ ಗೊಬ್ಬರ ಘಟಕಕ್ಕೆ ನೀಡುತ್ತಿದ್ದಾರೆ. ಆದರೆ ಈಗ ಅನ್ಯರು ಇಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಅವರ ವಿರುದ್ಧ ಕಠಿನ ಕಾನೂನು ಕ್ರಮ ಜರುಗಿಸಲಾಗುವುದು.
-ಎಚ್.ಕೆ. ಸುಧಾಕರ್‌, ಅಧ್ಯಕ್ಷರು, ಹೆಬ್ರಿ ಗ್ರಾ.ಪಂ.
ಮಾಹಿತಿ ನೀಡಿ

ಗ್ರಾಮಸ್ಥರ ಸಹಕಾರದಿಂದ ಪ್ರತಿ ರವಿವಾರ ಮುದ್ರಾಡಿಯ ಪ್ರತಿ ವಾರ್ಡ್‌ನಲ್ಲಿ ಸ್ವಚ್ಚತೆ ನಡೆಯುತ್ತಿದೆ. ಆದರೆ ಜರುವತ್ತು ರುದ್ರಭೂಮಿ ಸನಿಹ ಯಾರೋ ಕಸ ಹಾಕುತ್ತಿದ್ದು, ಅವರ ಬಗ್ಗೆ ತಿಳಿಸಿ ಜನರು ಬಹುಮಾನ ಗೆಲ್ಲಬಹುದು. ಕಸ ಹಾಕುವವರ ವಿರುದ್ಧ ದಂಡ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
-ಶಶಿಕಲಾ ಡಿ.ಪೂಜಾರಿ, ಅಧ್ಯಕ್ಷರು, ಮುದ್ರಾಡಿ ಗ್ರಾ.ಪಂ.
Advertisement

Udayavani is now on Telegram. Click here to join our channel and stay updated with the latest news.

Next