Advertisement

ಹೆರಿಗೆ ಮಾಡಿಸುವ ಹೊಂಡಗಳೇ ಹೆಚ್ಚು !

11:01 AM Jul 16, 2019 | Team Udayavani |

ಹೊನ್ನಾವರ: ನಗರದ ಪ್ರಮುಖ ಆಸ್ಪತ್ರೆಗಳಾದ ಪ್ರಭಾತನಗರದ ಸೇಂಟ್ ಇಗ್ನೇಷಿಯಸ್‌ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆಗಳಿಗೆ ಹೋಗುವ ರಸ್ತೆ ಮಾತ್ರವಲ್ಲ, ಆಸ್ಪತ್ರೆ ಎದುರಿನ ರಸ್ತೆಯಲ್ಲೇ ಹೊಂಡಗಳು ಬಿದ್ದು ಆಸ್ಪತ್ರೆಗೆ ಸೇರಿಸುವ ಮೊದಲೇ ಹೆರಿಗೆ ಅಥವಾ ಸಾವು ಎಂದು ಜನ ಮಾತಾಡಿಕೊಳ್ಳುವಂತಾಗಿದೆ.

Advertisement

ಸೇಂಟ್ ಇಗ್ನೇಷಿಯಸ್‌ ಆಸ್ಪತ್ರೆ ಮಾರ್ಗವಾಗಿಯೇ ಗಾಂಧಿನಗರ, ಪ್ರಭಾತನಗರಗಳಲ್ಲಿ ವಾಸಿಸಿರುವ ಸಾವಿರಾರು ಜನ ಬೈಕ್‌, ಕಾರುಗಳಲ್ಲಿ ಓಡಾಡುತ್ತಾರೆ. ಸರ್ಕಾರಿ ಆಸ್ಪತ್ರೆ ಮಾರ್ಗದಲ್ಲಿರುವ ನ್ಯಾಯಾಲಯ, ಬ್ಯಾಂಕ್‌, ಶಿಕ್ಷಣ ಸಂಸ್ಥೆಗಳಿಗೂ ಸಾವಿರಾರು ಜನ ಬಂದು ಹೋಗುತ್ತಾರೆ. ಶ್ರೀದೇವಿ ಆಸ್ಪತ್ರೆ ಮಾರ್ಗ ಬಂದರಕ್ಕೆ ಹೋಗುತ್ತದೆ. ಸಂತೆಯ ದಿನ ಹತ್ತಾರು ಸಾವಿರ ಜನ ಓಡಾಡುತ್ತಾರೆ. ಇವರಿಗೂ ಅದೇ ಗತಿ. ಅತಿ ಹೆಚ್ಚು ಜನ ಓಡಾಡುವ ರಸ್ತೆಯಲ್ಲಿ ಹೊಂಡ ತಪ್ಪಿಸಿಕೊಂಡು ಹೋಗುವುದು ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳನ್ನು ತುಂಬಿಕೊಂಡ ರಿಕ್ಷಾಗಳು ಪಲ್ಟಿಯಾಗುವ, ಹೊಂಡ ತಪ್ಪಿಸಲು ಹೋಗಿ ಇನ್ನೊಂದು ಹೊಂಡಕ್ಕೆ ಬೀಳುವ ಬೈಕ್‌ ಸವಾರರು, ಬಟ್ಟೆಯ ಮೇಲೆ ನೀರು ಹಾರಿಸುವ ಬಸ್ಸು, ಕಾರುಗಳು ನಿತ್ಯ ಹಗರಣ ಮಾಡುತ್ತಿವೆ. ಈ ರಸ್ತೆಗಳನ್ನು ಬೇಸಿಗೆಯಲ್ಲಿ ದುರಸ್ತಿ ಮಾಡಲಾಗಿತ್ತು. ಜೂನ್‌ನಲ್ಲಿ ಮಳೆ ಇರಲಿಲ್ಲ. ಜುಲೈ ಒಂದು ದಿನದ ಮಳೆಯಲ್ಲಿ ಪರಿಸ್ಥಿತಿ ಹೀಗಾಗಿದೆ.

ಪಪಂ ಅಧ್ಯಕ್ಷರ ಆಯ್ಕೆ ಆಗಿಲ್ಲ. ಈಗ ಇರುವ ಅಧಿಕಾರಿಗಳನ್ನು ಮಾತನಾಡಿಸುವಂತಿಲ್ಲ. ಒಂದೆಡೆ ಒಳಚರಂಡಿ ರಸ್ತೆಯನ್ನು ಅವ್ಯವಸ್ಥೆ ಮಾಡಿಟ್ಟಿದ್ದರೆ, ಮಳೆಗಾಲ ದುಸ್ಥಿತಿ ತಂದಿದೆ. ಪ್ರಮುಖ ರಸ್ತೆಗಳ ಪರಿಸ್ಥಿತಿ ಹೀಗಾದರೆ ದುರ್ಗಾಕೇರಿ, ಚರ್ಚ್‌ ರಸ್ತೆಗಳಲ್ಲಿ, ಪ್ರಭಾತನಗರದ ಒಳರಸ್ತೆಗಳಲ್ಲಿ ಓಡಾಡುವಂತಿಲ್ಲ. ಏಕಮುಖವಾಗಿ ಸಂಚಾರ ಇರವುದರಿಂದ ನಿತ್ಯ ಓಡಾಡುವ ದೂರದ ಬಸ್ಸುಗಳು ಪ್ರಯಾಣಿಕರನ್ನು ಎತ್ತಿ ಒಗೆಯುತ್ತ, ಇದು ಯಾವೂರ್ರೀ ಎಂದು ಕೇಳುವಂತೆ ಮಾಡುತ್ತದೆ. ಇದೇ ರಸ್ತೆಯಲ್ಲಿ ಪಪಂ ಪ್ರಶ್ನಿಸುವ ಅಧಿಕಾರವಿರುವ ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು ಓಡಾಡುತ್ತಾರೆ. ಇಬ್ಬರು ಶಾಸಕರು ಬ್ಯುಸಿಯಾಗಿದ್ದಾರೆ.

 

•ಜೀಯು, ಹೊನ್ನಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next