ಬೆಂಗಳೂರು: ನಗರದಲ್ಲಿ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ದಾಖಲೆಯ ಮಳೆಯಿಂದಾಗಿ 33 ಸಾವಿರ ರಸ್ತೆಗುಂಡಿಗಳು ಸೃಷ್ಟಿಯಾಗಿದ್ದು, ಮಳೆ ನಿಂತರೆ ಅ.15ರೊಳಗೆ ಎಲ್ಲ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ನಗರದಲ್ಲಿ 13 ಸಾವಿರ ಕಿ.ಮೀ ಉದ್ದದ ರಸ್ತೆಗಳಿದ್ದು, ಆ ಪೈಕಿ 1,180 ಕಿ.ಮೀ. ಉದ್ದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ. ಮಳೆಯಿಂದ ಈ ವ್ಯಾಪ್ತಿಯ ರಸ್ತೆಯಲ್ಲಿ 33,621 ರಸ್ತೆಗುಂಡಿಗಳನ್ನು ಪಾಲಿಕೆಯಿಂದ ಗುರುತಿಸಲಾಗಿದ್ದು, ಈಗಾಗಲೇ 16,978 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ 16,643 ರಸ್ತೆ ಗುಂಡಿಗಳ ದುರಸ್ತಿ ಬಾಕಿಯಿದ್ದು, ಮಳೆ ನಿಂತ ಕೂಡಲೇ ಕಾರ್ಯಾಚರಣೆ ನಡೆಸುವುದಾಗಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿನ ತುರ್ತು ಕಾಮಗಾರಿಗಳಿಗಾಗಿ 2017-18ನೇ ಸಾಲಿನಲ್ಲಿ 46.5 ಕೋಟಿ ರೂ. ಮೀಸಲಿಡಲಾಗಿದ್ದು, ಆ ಅನುದಾನದಲ್ಲಿ ವಾರ್ಡ್‌ಗಳಲ್ಲಿ ರಸ್ತೆಗುಂಡಿಗಳನ್ನು ದುರಸ್ತಿಪಡಿಸಲಾಗುವುದು. ಜತೆಗೆ ದೋಷ ಬಾದುತಾ ಅವಧಿಯಲ್ಲಿರುವ ರಸ್ತೆಗಳು, ನಗರೋತ್ಥಾನ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿರುವ ರಸ್ತೆಗಳಲ್ಲಿರುವ ರಸ್ತೆಗುಂಡಿಯನ್ನು ಆಯಾ ರಸ್ತೆ ಕಾಮಗಾರಿಯ ಗುತ್ತಿಗೆದಾರರಿಂದಲೇ ಮುಚ್ಚಿಸಲಾಗುವುದು ಎಂದರು.
ಇದರೊಂದಿಗೆ ರಸ್ತೆ ಇಂಡಿಯನ್ ರೋಡ್ ಕಾಂಗ್ರೆಸ್ -82 ಮತ್ತು ಕೇಂದ್ರ ಭೂ ಸಾರಿಗೆ ಸಚಿವಾಲಯ (ಮೋಸ್ಟ್) ವಿಶೇಷ ವಿವರಣೆಯಂತೆ ಮುಚ್ಚಲಾಗುತ್ತಿದೆ. ಇದರೊಂದಿಗೆ ಪೈಥಾನ್ ಯಂತ್ರ ಬಳಸಿ ಗುಂಡಿ ಮುಚ್ಚಿಸಲು ಗುತ್ತಿಗೆ ನೀಡಲಾಗಿದ್ದು, ಇಂತಹ ಯಂತ್ರಗಳನ್ನು ಬಳಸಿ ಯಾವ ರಸ್ತೆಗಳಲ್ಲಿನ ಗುಂಡಿ ಗಳನ್ನು ಮುಚ್ಚಬೇಕು ಎಂಬುದನ್ನು ಗುತ್ತಿಗೆ ಒಪ್ಪಂದದಲ್ಲಿ ತಿಳಿಸಲಾಗಿದೆ. ಇನ್ನುಳಿದ ರಸ್ತೆಗಳನ್ನು ಪಾಲಿಕೆಯ ಅನುದಾನದಲ್ಲಿ ಮುಚ್ಚಲು ಕ್ರಮಕೈ ಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ರಸ್ತೆ ಗುಂಡಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡರೂ, ಮಳೆಯಿಂದ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಮಳೆ ಮುಂದುವರಿದಿರುವ ಹಿನ್ನೆಲೆ ಹಾಟ್-ಮಿಕ್ಸ್ ಬಳಸಿ ಗುಂಡಿ ಮುಚ್ಚಿಸಲು ಸಾಧ್ಯವಾಗದ ಹಿನ್ನೆಲೆ ಜನರ ಸುರಕ್ಷತೆ ದೃಷ್ಟಿಯಿಂದ ಗುಂಡಿಗಳನ್ನು ತಾತ್ಕಾಲಿಕ ವಾಗಿ ವೆಟ್-ಮಿಕ್ಸ್ ಬಳಸಿ ಮುಚ್ಚಲಾಗುತ್ತಿದೆ. ಜತೆಗೆ ಕೋಲ್ಡ್ ಟಾರ್ ಲಭ್ಯವಿರುವ ಕಡೆಗಳಲ್ಲಿ ಕೋಲ್ಡ್ ಮಿಕ್ಸ್ ಬಳಸಿ ರಸ್ತೆ ಗುಂಡಿ ಮುಚ್ಚಲಾಗತ್ತಿದೆ ಎಂದು ತಿಳಿಸಿದರು.
ಇಂದು ಮುಖ್ಯಮಂತ್ರಿಗಳ ಸಭೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾಗಿರುವ ಅನಾಹುತಗಳ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಳೆಯಿಂದ ಆಗಿರುವ ಅನಾಹುತಗಳ ಕೈಗೊಂಡಿರುವ ಕ್ರಮಗಳು, ರಸ್ತೆಗುಂಡಿಗಳ ನಿಯಂತ್ರಣ ಸೇರಿದಂತೆ ಹಲವಾರು ವಿಚಾರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.