ಶಿಡ್ಲಘಟ್ಟ: ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಭಾಷಣಗಳಿಗೆ ಕೊರತೆಯಿಲ್ಲ. ಆದರೆ ಚಿಕ್ಕಬಳ್ಳಾಪುರಜಿಲ್ಲೆಯ ಸಹಸ್ರಾರು ಪ್ರಯಾಣಿಕ ವಾಹನಗಳಿಗೆಆಸರೆಯಾಗಿರುವ ಚಿಕ್ಕಬಳ್ಳಾಪುರ-ಗೌರಿಬಿದನೂರಿನರಾಷ್ಟ್ರೀಯ ಹೆದ್ದಾರಿ-234 ವಾಹನ ಸವಾರರಿಗೆಯಮಲೋಕ್ಕೆ ದಾರಿ ತೋರಿಸುವ ರಹದಾರಿಯಾಗಿ ಪರಿವರ್ತನೆಯಾಗಿದೆ.
ಸಂಚರಿಸಲು ಹರಸಾಹಸ: ಚಿಕ್ಕಬಳ್ಳಾಪುರದಿಂದಗೌರಿಬಿದನೂರು ಮಾರ್ಗದಲ್ಲಿ ಒಮ್ಮೆ ಸಂಚರಿಸಿದರೆ ರಾಷ್ಟ್ರೀಯ ಹೆದ್ದಾರಿಯ ಸಾಕ್ಷಾತ್ ದರ್ಶನವಾಗುತ್ತದೆ. ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಿಂತಲೂ ಕಡೆಯಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದೇ ಹರಸಾಹಸ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುತೇಕ ಗುಂಡಿಗಳದ್ದೆ ಕಾರುಬಾರು. ರಸ್ತೆ ತುಂಬ ಗುಂಡಿಗಳು ತುಂಬಿದ್ದು, ವಾಹನ ಸವಾರರು ಒಂದು ಗುಂಡಿತಪ್ಪಿಸಲು ಹೋಗಿ ಮತ್ತೂಂದು ಗುಂಡಿಯಲ್ಲಿ ವಾಹನ ಇಳಿಸುವ ದುಸ್ಥಿತಿಗೆ ಮುಕ್ತಿ ಇಲ್ಲದಂತಾಗಿದೆ.
ಅಪಾಯ ಕಟ್ಟಿಟ್ಟ ಬುತ್ತಿ: ರೇಷ್ಮೆ, ಹೈನುಗಾರಿಕೆ, ಹೂ- ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ರೈತರು ತಾವು ಬೆಳೆದ ಉತ್ಪನ್ನಗಳನ್ನು ದೆಹಲಿ ಅಥವಾ ಮುಂಬೈಗೆ ಸಾಗಿಸಬೇಕಾದರೆ ಚಿಕ್ಕಬಳ್ಳಾಪುರ-ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ಮೂಲಕವೇ ತೆರಳಬೇಕು. ಒಂದು ಕಡೆ ಕಣಿವೆ ಪ್ರದೇಶ, ಮತ್ತೂಂದೆಡೆ ಹೊಂಡಮಯವಾಗಿರುವ ರಸ್ತೆಗಳು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅಂಗೈಯಲ್ಲಿ ಜೀವಯಿಟ್ಟುಕೊಂಡು ಸಂಚರಿಸಬೇಕಾದ ಶೋಚನೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸ್ವಲ್ಪ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ಮರಣ ಗುಂಡಿಗಳಾಗಿ ಪರಿವರ್ತನೆ: ಚಿಕ್ಕಬಳ್ಳಾಪುರ ದಿಂದ ಗೌರಿಬಿದನೂರು ಮಾರ್ಗದಲ್ಲಿ ಪ್ರಾರಂಭಿಸಿದ ಕಾಮಗಾರಿ ಆಮೆಗತ್ತಿಯಲ್ಲಿ ಸಾಗುತ್ತಿರುವುದರಿಂದ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮುಕ್ತಿ ಯಾವಾಗ ಎಂದು ಪ್ರಯಾಣಿಕರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಸಂಚರಿಸಬೇಕಾದ ದುಸ್ಥಿತಿ ಬಂದೂದಗಿದೆ. ರಸ್ತೆ ಯುದ್ದಕ್ಕೂ ಹೊಂಡ-ಗುಂಡಿಗಳು ತುಂಬಿ ಹೋಗಿ ದ್ದು, ವಾಹನ ಸವಾರರಿಗೆ ಗುಂಡಿಗಳು ಮರಣ ಗುಂಡಿಗಳಾಗಿ ಪರಿವರ್ತನೆಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ನೋಡಿ ಸಾಕಾಗಿರುವ ಜನರು ಮತ್ತು ವಾಹನ ಸವಾರರು ಈ ರಾಷ್ಟ್ರೀಯ ಹೆದ್ದಾರಿ ಗಿಂತಲೂ ಜಿಲ್ಲಾ ಹೆದ್ದಾರಿಗಳು ಎಷ್ಟು ಮೇಲು ಎನ್ನುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಎಷ್ಟು ಭೀಕರವಾಗಿದೆ ಎಂದರೆ ಊಹಿಸಲು ಸಾಧ್ಯವಿಲ್ಲದಂತಾಗಿದೆ. ಸರಕು ಸಾಗಾಣಿಕೆ ವಾಹನಗಳ ಚಾಲಕರು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾದರೆ, ಮತ್ತೂಂದೆಡೆ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದಂತಾಗಿದೆ.
ಸಂಸದರು-ಸಚಿವರು ಗಮನಹರಿಸಲಿ : ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234 (ಚಿಕ್ಕಬಳ್ಳಾಪುರ-ಗೌರಿಬಿದನೂರಿನ) ಮಾರ್ಗದ ದುಸ್ಥಿತಿಯಿಂದ ಜನ ಮತ್ತು ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡ ಅವರು ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ವೇಗವಾಗಿ ಕಾಮಗಾರಿ ಮುಗಿಸಲಿಲ್ಲ. ಹೀಗಾಗಿ ಚಿಕ್ಕಬಳ್ಳಾಪುರದಿಂದಶಿಡ್ಲಘಟ್ಟ ಮಾರ್ಗ ಅಭಿವೃದ್ಧಿಗೊಳಿಸಿರುವ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಸೇತುವೆಗಳ ಕಾಮಗಾರಿ ಪರಿಶೀಲಿಸುತ್ತೇನೆ.
–ಚಂದ್ರಶೇಖರ್, ಎಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಕ್ಕಬಳ್ಳಾಪುರ
– ಎಂ.ಎ.ತಮೀಮ್ ಪಾಷ