Advertisement

ಗುಂಡಿ ಬಿದ್ದ ರಸ್ತೆ: ಕಣ್ಮುಚ್ಚಿ ಕುಳಿತ ಪುರಸಭೆ ಅಧಿಕಾರಿ,ಜನಪ್ರತಿನಿಧಿಗಳ ವಿರುದ್ದ ಆಕ್ರೋಶ

05:59 PM Jul 04, 2022 | Team Udayavani |

ಪಿರಿಯಾಪಟ್ಟಣ: ಪುರಸಭಾ ವ್ಯಾಪ್ತಿಯ ಹಳೆಪೇಟೆ ಕಂಠಾಪುರದಲ್ಲಿ ರಸ್ತೆಯೇ ಬಾಯ್ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಇಲ್ಲಿನ ಪುರಸಭಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನವಹಿಸಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇಲ್ಲಿನ ಪುರಸಭೆ ವ್ಯಾಪ್ತಿಗೆ ಒಳಪಡುವ ಹಳೆಪೇಟೆ-ಕಂಠಾಪುರ ಗ್ರಾಮವು ಪಟ್ಟಣದ ಹೃದಯ ಭಾಗದಿಂದ ಒಂದೂವರೆ ಕಿ.ಮೀ ದೂರದಲ್ಲಿದ್ದು, ಇಲ್ಲಿ ಹೆಚ್ಚಾಗಿ ಹಿಂದುಳಿದ ಉಪ್ಪಾರ ಹಾಗೂ ದಲಿತ ಸಮುದಾಯದ ಜನರು ವಾಸವಾಗಿದ್ದಾರೆ.  ಈ ಹಿಂದೆ ಈ ಗ್ರಾಮವು ಚೌತಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿತ್ತು. 2016 ರಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಇದು ಪುರಸಭೆಗೆ ಸೇರ್ಪಡೆಯಾಯಿತು. ಕಂಠಾಪುರವು ಪುರಸಭೆಗೆ ಒಳಪಟ್ಟ ಅಂದಿನಿಂದ ಇಲ್ಲಿಯವರೆಗೂ ಈ ಗ್ರಾಮಕ್ಕೆ ಪುರಸಭೆಯಿಂದ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ, ರಸ್ತೆ ನಿರ್ಮಾಣ ಸೇರಿದಂತೆ ಯಾವೊಂದು ಮೂಲಭೂತ ಸೌಲಭ್ಯಗಳನ್ನು ಈ ವರೆಗೂ ಒದಗಿಸಿಲ್ಲವೆಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದ್ದು, ಮಳೆಗಾಲ ಬಂತೆಂದರೆ ಇಲ್ಲಿನ ಗುಂಡಿಬಿದ್ದ ರಸ್ತೆಗಳೆಲ್ಲ ಜಲಾವೃತಗೊಂಡು ಸಂಚರಿಸುವವರಿಗೆ ಕಿರಿಕಿರಿ ಉಂಟಾಗಿ ಏಳುವುದೆಷ್ಟೋ ಬೀಳುವುದೆಷ್ಟೋ ಎಂಬ ಭೀತಿಯಲ್ಲಿಯೇ ದಾರಿ ಸಾಗಬೇಕಿದೆ. ಈ ಬಗ್ಗೆ ಹತ್ತಾರು ಬಾರಿ ಪುರಸಭಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪರಿಹಾರ ನೀಡುವಲ್ಲಿ  ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್ ವಿರುದ್ಧ ಅವಹೇಳನಕಾರಿ ವಿಡಿಯೋ: ನಿರ್ದೇಶಕ ನಂದಕಿಶೋರ್ ಆಕ್ರೋಶ

ಇಲ್ಲಿನ ಮಕ್ಕಳು ಶಾಲಾ-ಕಾಲೇಜಿಗೆ ತೆರಳಬೇಕು, ದಿನಬೆಳಗಾದರೆ ಇಲ್ಲಿನ ಜನ ಕೂಲಿನಾಲಿ ಮಾಡಲು ದೂರದೂರುಗಳಿಗೆ ಹೋಗಿ ಬರುವುದು ರಾತ್ರಿಯಾಗುತ್ತದೆ ಆಗ ತಮ್ಮ ಮನೆಗಳಿಗೆ ಈ ರಸ್ತೆಯಲ್ಲಿಯೇ ತೆರಳಬೇಕು ಆ ಸಂದರ್ಭದಲ್ಲಿ ಈ ರಸ್ತೆಗಳೆಲ್ಲಾ ಹಾಳಾಗಿದ್ದು, ವಾಹನ ಸವಾರರು, ಸಾರ್ವಜನಿಕರು  ಬಿದ್ದು ಗಾಯಗೊಂಡು ಎದ್ದು ಹೋಗುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಿಪ್ತ ಭಾವಕ್ಕೆ ಜಾರಿಕೊಂಡು ತಾತ್ಸಾರ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಬಾರಿಗಿಂತಲೂ ಈ ಬಾರಿ ರಸ್ತೆಯ ಗುಂಡಿಗಳು ಹೆಚ್ಚಾಗಿದ್ದು, ಅದರಲ್ಲೂ, ನಿತ್ಯ ನೂರಾರು ಶಾಲಾ-ಮಕ್ಕಳು, ಸಾರ್ವಜನಿಕರು ಬೈಕುಗಳು ಸಂಚರಿಸುತ್ತಿದ್ದು ಆಯಾ ತಪ್ಪಿ ಬಿದ್ದು ಕೈಕಾಲು ಗಾಯ ಮಾಡಿಕೊಂಡರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಉತ್ಸಾಹ ತೋರುತ್ತಿಲ್ಲ. -ಪಿ.ಎನ್.ಮಣಿಕುಮಾರ್, ಸ್ಥಳೀಯ ನಿವಾಸಿ

Advertisement

ಹಳೆಪೇಟೆ ಕಂಠಾಪುರ ಗ್ರಾಮವು ಪಟ್ಟಣದ ಹೃದಯ ಭಾಗದಿಂದ ಕೂಗಳತೆ ದೂರದಲ್ಲಿದೆ. ಈ ಗ್ರಾಮ ಪುರಸಭೆಗೆ ಸೇರಿ 7 ವರ್ಷ ಕಳೆದರೂ ಅಭಿವೃದ್ದಿ ಮಾತ್ರ ಮರೀಚಿಕೆಯಾಗಿದೆ. ಇಲ್ಲಿ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ರಸ್ತೆ ಚರಂಡಿ, ಯಾವುದು ಸರಿ ಇಲ್ಲ. ಇಂಥ ಜ್ವಲಂತ ಸಮಸ್ಯೆ ಕಣ್ಣಮುಂದಿದ್ದರೂ ವಾರ್ಡಿನ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಎಚ್ಚೆತ್ತುಕೊಳ್ಳದೆ ಇನ್ನೂ ನಿದ್ರಾವಸ್ಥೆಯಲ್ಲಿದ್ದಾರೆ.-ಮೂರ್ತಿ ಸ್ಥಳೀಯ ನಿವಾಸಿ

-ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ

Advertisement

Udayavani is now on Telegram. Click here to join our channel and stay updated with the latest news.

Next