ಇಸ್ಲಾಮಾಬಾದ್ : ಅತ್ಯಂತ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕ್ – ಚೀನ ದೋಸ್ತಿಗೆ ರೋಡ್ ಬ್ಲಾಕ್ ಉಂಟಾಗಿದೆ.
ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯಡಿ ರೂಪು ಗೊಳ್ಳಲಿದ್ದ ಮೂರು ರಸ್ತೆ ಯೋಜನೆಗಳಿಗೆ ತಾನು ಹಣ ಪೂರೈಸುವುದನ್ನು ನಿಲ್ಲಿಸಿರುವುದಾಗಿ ಚೀನ ಹೇಳಿದೆ. ಪಾಕಿಸ್ಥಾನಕ್ಕೆ ಆಘಾತಕಾರಿಯಾಗಿರುವ ಈ ವಿಷಯವನ್ನು ಪಾಕ್ ದೈನಿಕ ಡಾನ್ ಪ್ರಕಟಿಸಿದೆ.
ಸಿಪಿಇಸಿ ಯೋಜನೆಡಯಡಿ ಮೂರು ಪ್ರಮುಖ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಬೀಜಿಂಗ್ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡುವುದನ್ನು ಈಗ ಎದುರುನೋಡಲಾಗುತ್ತಿದೆ. ಅಲ್ಲಿಯ ತನಕ ಈ ಪ್ರಸ್ತಾವಿತ ಯೋಜನೆಗೆ ಹಣ ಪೂರೈಸುವುದನ್ನು ಚೀನ ಸರಕಾರ ನಿಲ್ಲಿಸಿರುವುದಾಗಿ ಹೇಳಿದೆ ಎಂದು ಡಾನ್ ತನ್ನ ವರದಿಯಲ್ಲಿ ತಿಳಿಸಿದೆ.
ಸಿಪಿಇಸಿ ಯೋಜನೆಯ ಅನುಷ್ಠಾನದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಚೀನದ ಉನ್ನತ ನಾಯಕತ್ವಕ್ಕೆ ತೀವ್ರ ಕಳವಳ ಉಂಟಾಗಿದೆ. ಮತ್ತು ಇಂಥವೇ ಕೆಲವು ಕಾರಣಗಳಿಗಾಗಿ ಸದ್ಯ ಸಿಪಿಇಸಿ ಯೋಜನೆಗೆ ಹಣ ಪೂರೈಸುವುದನ್ನು ಚೀನ ಸರಕಾರ ನಿಲ್ಲಿಸಲು ನಿರ್ಧರಿಸಿದೆ ಎಂಬ ವಿಷಯವನ್ನು ಚೀನದ ಉನ್ನತ ಅಧಿಕಾರಿಗಳು ಪಾಕಿಸ್ಥಾನದ ಉನ್ನತ ಅಧಿಕಾರಿಗಳಿಗೆ ಸಭೆಯೊಂದರಲ್ಲಿ ತಿಳಿಸಿದ್ದಾರೆ ಎಂದು ಡಾನ್ ಹೇಳಿದೆ.
ಗÌದರ್ ಬಂದರಿನಲ್ಲಿ ನಡೆಯುವ ವಾಣಿಜ್ಯ ವಹಿವಾಟುಗಳನ್ನು ಚೀನದ ಕರೆನ್ಸಿಯಾಗಿರುವ ರೆನ್‌ಮಿನ್‌ಬಿಯಲ್ಲೇ ನಡೆಯುವುದಕ್ಕೆ ಅವಕಾಶ ನೀಡಬೇಕೆಂಬ ಚೀನದ ಶರತ್ತನ್ನು ಪಾಕಿಸ್ಥಾನ ತಿರಸ್ಕರಿಸಿರುವುದೇ ಉಭಯ ದೇಶಗಳ ನಡುವಿನ ಸರ್ವ ಋತು ದೋಸ್ತಿಗೆ ಎದುರಾಗಿರುವ ಮೊದಲ ರೋಡ್ ಬ್ಲಾಕ್ ಆಗಿದೆ ಎಂದು ತಿಳಿಯಲಾಗಿದೆ.
ಪಾಕ್ ಅಧಿಕಾರಿಗಳೊಂದಿಗೆ ಚೀನ ನಡೆಸಿದ್ದ ಸಭೆಯಲ್ಲಿ ಈ ವಿಷಯಕ್ಕೆ ಅಧಿಕ ಮಹತ್ವ ನೀಡಲಾಗಿತ್ತು ಮತ್ತು ಪಾಕಿಸ್ಥಾನದ ಚೀನೀ ಕರೆನ್ಸಿಯಲ್ಲಿ ವಾಣಿಜ್ಯ ವಹಿವಾಟು ನಡೆಸುವುದಕ್ಕೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎಂದು ಡಾನ್ ವರದಿ ಮಾಡಿದೆ.
ಚೀನದ ಮಾರ್ಗದರ್ಶಿ ಸೂತ್ರಗಳ ಬಿಡುಗಡೆಯಾದಾಗ ಸಿಪಿಇಸಿ ಯೋಜನೆಯ ರೂಪರೇಖೆಯೇ ಬದಲಾಗುವ ಸಾಧ್ಯತೆ ಇದೆ ಎಂದು ಡಾನ್ ಹೇಳಿದೆ.
ಪಾಕ್ ಆಕ್ರಮಿತ ವಿವಾದಿತ ಕಾಶ್ಮೀರದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸುವ ಯೋಜನೆಯಿಂದಲೂ ಚೀನ ಹಿಂದೆ ಸರಿದಿರುವುದಾಗಿ ವರದಿಯಾಗಿದೆ.