Advertisement

ರಸ್ತೆ ಕಾಮಗಾರಿ ವಿಳಂಬ, ಕಳಪೆ: ಉಬರಡ್ಕ ಗ್ರಾಮಸ್ಥರಿಂದ ರಸ್ತೆ ತಡೆ

12:32 AM Jan 28, 2020 | Sriram |

ಸುಳ್ಯ: ಉಬರಡ್ಕದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆ ಮತ್ತು ವಿಳಂಬವಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಳಕ್ಕೆ ಬಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಕಾಮಗಾರಿ ಗುತ್ತಿಗೆದಾರರು, ಊರವರ ಸಲಹೆ ಪಡೆದು, ಜ. 28ರಿಂದ ಕಾಮಗಾರಿ ಮರು ಆರಂಭಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗಿದೆ.
ಉಬರಡ್ಕ ರಸ್ತೆ ಅಭಿವೃದ್ಧಿಗೆ 2.75 ಕೋಟಿ ರೂ. ಅನುದಾನ ಮಂಜೂರುಗೊಂಡಿದ್ದು, ಕೆಲವು ತಿಂಗಳ ಹಿಂದೆ ಕೆಲಸ ಆರಂಭಗೊಂಡಿದೆ. ರಸ್ತೆಯ ಎರಡೂ ಬದಿ ಅಗೆದು ಜಲ್ಲಿ ಹಾಕಲಾಗಿದೆ. ಈ ಜಲ್ಲಿ ರಸ್ತೆಗೆ ಹಬ್ಬಿ ವಾಹನ ಸಂಚಾರ ಕಷ್ಟಕರವಾಗುತ್ತಿದೆ ಹಾಗೂ ಕಾಮಗಾರಿ ವಿಳಂಬವಾಗಿದೆ ಎಂದು ಗ್ರಾಮಸ್ಥರಾದ ಪಿ.ಎಸ್‌. ಗಂಗಾಧರ್‌, ಅನಿಲ್‌ ಬಳ್ಳಡ್ಕ, ಸುರೇಶ್‌ ಅಮೈ, ಜತ್ತಪ್ಪ ಗೌಡ, ಮಧುಸೂದನ್‌ ಸಹಿತ 50ಕ್ಕೂ ಹೆಚ್ಚಿ ಮಂದಿ ಸೂಂತೋಡಿನಲ್ಲಿ ಸೇರಿ ರಸ್ತೆ ತಡೆ ನಡೆಸಿದರು.

ವಿಷಯ ತಿಳಿದು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಸಣ್ಣೇಗೌಡ ಹಾಗೂ ಗುತ್ತಿಗೆದಾರ ಸ್ಥಳಕ್ಕೆ ಬಂದು ಪ್ರತಿಭಟನ ನಿರತರೊಂದಿಗೆ ಮಾತುಕತೆ ನಡೆಸಿದರು. ಪಿ.ಎಸ್‌. ಗಂಗಾಧರ್‌, ಅನಿಲ್‌ ಬಳ್ಳಡ್ಕ ಸಮಸ್ಯೆ ಹೇಳಿದಾಗ, ಎಂಜಿನಿಯರ್‌ ಗುತ್ತಿಗೆದಾರರನ್ನು ಪ್ರಶ್ನಿಸಿದರು. ಬಳಿಕ ಗುತ್ತಿಗೆದಾರರು ಕಾಮಗಾರಿ ಆರಂಭಿಸುವುದಾಗಿ ಹೇಳಿದರು. ಕೆಲಸ ಮಾಡುವಾಗ ಊರವರ ಸಲಹೆ ಪಡೆಯುವಂತೆ ಎಂಜಿನಿಯರ್‌ ಗುತ್ತಿಗೆದಾರರಿಗೆ ಸೂಚಿಸಿದರು.ಸ್ಥಳದಲ್ಲಿ ಸುಳ್ಯ ಠಾಣೆ ಎಸ್‌.ಐ. ಹರೀಶ್‌ ಹಾಗೂ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next