Advertisement

2 ತಿಂಗಳಾದ್ರೂ ರಸ್ತೆ ಕಾಮಗಾರಿ ಆರಂಭಿಸಿಲ್ಲ

03:20 PM Oct 07, 2019 | Team Udayavani |

ಮಾಸ್ತಿ: ಗ್ರಾಮದಿಂದ ಹಸಾಂಡಹಳ್ಳಿ ಮಾರ್ಗವಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಯಾಗಿದೆ. ಇದನ್ನು ಮನಗಂಡು ಶಾಸಕ ಕೆ.ವೈ.ನಂಜೇಗೌಡ ಎರಡು ತಿಂಗಳ ಹಿಂದೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿದ್ದರಾದರೂ ಇನ್ನೂ ಕಾರ್‍ಯಾಂಭವಾಗಿಲ್ಲ, ಬಹುತೇಕ ಗ್ರಾಮಗಳಿಗೆ ತೊರಲಕ್ಕಿ ರಸ್ತೆಯು ಪ್ರಮುಖ ಸಂಪರ್ಕ ಕೊಂಡಿ ಯಾಗಿದೆ. ಮಾಸ್ತಿಯಿಂದ ಹಸಾಂಡಹಳ್ಳಿ ಮಾರ್ಗವಾಗಿ ಓಬಟ್ಟಿ ಅಗ್ರಹಾರ ಸಮೀಪದ ಟೇಕಲ್‌ ರಸ್ತೆಗೂ ಇದು ಸಂಪರ್ಕಿಸುತ್ತದೆ. ಹಸಾಂಡಹಳ್ಳಿ ಮಾರ್ಗವಾಗಿ ಪಿಚ್ಚಗುಂಟ್ರಹಳ್ಳಿ, ನಟುವರಹಳ್ಳಿ, ಹಸಾಂಡಹಳ್ಳಿ, ಕುಪ್ಪೂರು, ತೊಳಸನದೊಡ್ಡಿ, ಮುತ್ತೇನಹಟ್ಟಿ, ರಾಯಸಂದ್ರ, ದೊಡ್ಡದಾನವಹಳ್ಳಿ, ತೊರಲಕ್ಕಿ ಸೇರಿ ಟೇಕಲ್‌, ಕೋಲಾರ ಹಾಗೂ ಬಂಗಾರಪೇಟೆ, ಕೆಜಿಎಫ್ಕಡೆಗೆ ನೂರಾರು ದ್ವಿಚಕ್ರ ವಾಹನ, ಸರ್ಕಾರಿ, ಖಾಸಗಿ ಬಸ್‌ ಹೆಚ್ಚಾಗಿ ಸಂಚರಿಸುತ್ತವೆ.

Advertisement

ಹೆದರುವ ವಾಹನ ಸವಾರರು: ಈ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಪೂರ್ಣವಾಗಿ ಹಾಳಾಗಿದೆ. ಭಾರೀ ಗಾತ್ರದ ಗುಂಡಿಗಳು ಬಿದ್ದಿದ್ದು, ಜಲ್ಲಿ ಕಲ್ಲುಗಳು ಮೇಲೆದ್ದಿವೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಲ್ಲದೆ, ಕೆಸರು ಗದ್ದೆಯಾಗಿ ಮಾಪಾಡಾಗುತ್ತದೆ. ಬೇಸಿಗೆಯಲ್ಲಿ ದೂಳು ತುಂಬಿಕೊಳ್ಳುತ್ತದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ. ಬಸ್‌ಗಳು ಪ್ರಯಾಣಿಕರು ಸೀಟ್‌ ಮೇಲೆ ಕೂರಲಾಗದೇ, ಗುಂಡಿಗಳಿಂದ ಸೊಂಟು ನೋವು ಭರಿಸಿಕೊಳ್ಳುವಂ ತಾಗಿದೆ. ದ್ವಿಚಕ್ರ ವಾಹನ ಸವಾರರು ಜೀವವನ್ನು ಅಂಗೈಲಿಟ್ಟುಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಶಾಸಕರಿಗೆ ಮನವಿ ಮಾಡಿದ

ಕಾರಣ 8 ಕಿ.ಮೀ. ಇರುವ ರಸ್ತೆ ಅಭಿವೃದ್ಧಿಗೆ ಸರ್ಕಾರವು ಒಆರ್‌ಎಫ್ ಯೋಜನೆಯಡಿ 2 ಕೋಟಿ ರೂ. ಬಿಡುಗಡೆಗೆ ಮಾಡಿತ್ತು. ನಂತರ 2 ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ವೈ.ನಂಜೇಗೌಡ ಭೂಮಿ ಪೂಜೆ ನೆರವೇರಿಸಿದ್ದರು. ಯಾವುದೇ ಕಾರಣಕ್ಕೂ ಕಾಮಗಾರಿ ತಡಮಾಡದೇ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದರು. ಎರಡು ತಿಂಗಳು ಕಳೆದರೂ ರಸ್ತೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ, ಇದರಿಂದ ಈ ಭಾಗದ ಜನತೆಗೆ ರಸ್ತೆಯ ಅಭಿವೃದ್ಧಿಯ ಕನಸು ಕನಸಾಗಿ ಉಳಿದಿದೆ. ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಹಾಳಾಗಿರುವ ಮಾಸ್ತಿ- ಹಸಾಂಡಹಳ್ಳಿ ರಸ್ತೆ ಸರಿಪಡಿಸಿ ವಾಹನ ಹಾಗೂ ನಾಗರಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

 

-ಎಂ.ಮೂರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next