Advertisement

ರಸ್ತೆ ಅಗಲೀಕರಣ ಹೋರಾಟಕ್ಕೆ ವಕೀಲರ ಸಾಥ್

01:38 PM Sep 20, 2019 | Team Udayavani |

ಬ್ಯಾಡಗಿ: ಮುಖ್ಯ ರಸ್ತೆ ಅಗಲೀಕರಣ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಆಗ್ರಹಿಸಿ ಸೆ. 21 ರಂದು ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ನ್ಯಾಯವಾದಿಗಳ ಸಂಘವು ಕೈಜೋಡಿಸಲಿದೆ ಎಂದು ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಹೇಳಿದರು.

Advertisement

ಪಟ್ಟಣದ ನ್ಯಾಯವಾದಿಗಳ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ನಾವೆಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸಬೇಕಿದೆ. ಇದರಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿ ಇಲ್ಲ. ಬದಲಾಗಿ ತಾಲೂಕಿನ ರೈತರು ಹಾಗೂ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದ್ದು, ಇದರಿಂದ ಜನರು ಎದುರಿಸುತ್ತಿರುವ ನೀರಿನ ಬವಣೆ ಹಾಗೂ ಮುಖ್ಯ ರಸ್ತೆಯಲ್ಲಿ ಉಂಟಾಗುತ್ತಿರುವ ಅಪಘಾತಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ವಾಗಲಿದೆ ಎಂದರು.

ನ್ಯಾಯವಾದಿ ಎಂ.ಎಫ್‌. ಮುಳುಗುಂದ ಮಾತನಾಡಿ, ಮುಖ್ಯ ಅಗಲೀಕರಣ ಪಟ್ಟಣದ ಅಭಿವೃದ್ಧಿ, ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ರಸ್ತೆ ಅಗಲೀಕರಣ ಅವಶ್ಯವಾಗಿದೆ. ಆದರೆ, ಎಷ್ಟೇ ಹೋರಾಟಗಳಾದರೂ ಪಟ್ಟಣದಲ್ಲಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವರ್ತಕರು ಮಾತ್ರ ಇದಕ್ಕೆ ಸಹಕಾರ ನೀಡುತ್ತಿಲ್ಲ. ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಎಲ್ಲರಿಗಿಂತ ಅವರಿಗೆ ಹೆಚ್ಚಾಗಿ ಅಗಲೀಕರಣದ ಅವಶ್ಯಕತೆಯಿದೆ. ಸಾವಿರಾರು ಕೋಟಿ ವ್ಯವಹಾರ ನಡೆಸುವ ಅವರೇ ಅಗಲೀಕರಣಕ್ಕೆ ಬೆಂಬಲ ಸೂಚಿಸುತ್ತಿಲ್ಲ ಇದು ಖೇದಕರ ವಿಷಯ ಎಂದರು.

ಮಾಲತೇಶ ಹಾವೇರಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಜನಪರ ಹೋರಾಟ ನಡೆದರೂ ನ್ಯಾಯವಾದಿಗಳ ಸಂಘ ಅವರ ಬೆನ್ನಿಗೆ ನಿಲ್ಲುತ್ತ ಬಂದಿದೆ. ಆದರೆ ನಮ್ಮ ಮೇಲೆ ಹಲ್ಲೆಯಾದಾಗ ಯಾವ ಸಂಘ ಸಂಸ್ಥೆಗಳು ನಮ್ಮ ಸಹಕಾರಕ್ಕೆ ನಿಲ್ಲಲ್ಲ. ಅಲ್ಲದೇ ಈಗಾಗಲೇ ಹಲವಾರು ಬಾರಿ ಅಗಲೀಕರಣ ಸಮಿತಿ ಹೋರಾಟಕ್ಕೆ ಕೈಜೋಡಿಸಿದ್ದೇವೆ. ಹೋರಾಟದ ಸಮಯದಲ್ಲಿ ಮತ್ತು ಪ್ರತಿಭಟನೆ ವಾಪಸ್‌ ಪಡೆಯುವ ಸಮಯದಲ್ಲಿ ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್‌.ಎಸ್‌.ಶೆಟ್ಟರ್‌, ನ್ಯಾಯವಾದಿಗಳಾದ ಬಟ್ಟಲಕಟ್ಟಿ, ಬೆಳಕೇರಿಮಠ, ಪಿ.ಎಸ್‌. ಶಿಂಗ್ರಿ, , ಜಾಧವ ಸೇರಿದಂತೆ ಇನ್ನಿತರರು ಮುಖ್ಯ ರಸ್ತೆ ಅಗಲೀಕರಣ ಪ್ರತಿಭಟನೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತ ಪಡಿಸಿದರೆ ಕೆರೆಗೆ ನೀರು ತುಂಬಿಸುವ ಯೋಜನೆ ಹೋರಾಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು. ನ್ಯಾಯವಾದಿಗಳಾದ ಡಿ.ಎಚ್‌. ಬುಡ್ಡನ ಗೌಡನಗೌಡ, ಯಶೋಧರ ಅರ್ಕಾಚಾರಿ, ಸುರೇಶ ಕಾಟೇನಹಳ್ಳಿ, ಟಿ.ಆರ್‌. ಮಠದ, ಪಿ.ಎಸ್‌ ಚೂರಿ, ಟಿ.ಪಿ.ಶೀಗಿಹಳ್ಳಿ, ಎಸ್‌.ಎನ್‌.ಬಾರ್ಕಿ, ಭಾರತಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next