ಕೆಂಭಾವಿ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಯಡಿಯಾಪುರಕ್ಕೆ ಹೋಗುವ ರಸ್ತೆಯ ವಾರ್ಡ್ ಸಂಖ್ಯೆ 1ರಲ್ಲಿ ಕಂದಕಗಳು ಬಿದಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ.
ಅಂಬೇಡ್ಕರ್ ವೃತ್ತದ ಮೂಲಕ ಯಡಿಯಾಪುರ, ಮಾಳಹಳ್ಳಿ, ಕೂಡಲಗಿ ಗ್ರಾಮಗಳಿಗೆ ಪ್ರತಿನಿತ್ಯ ಶಾಲಾ ವಾಹನಗಳು
ಸೇರಿದಂತೆ ದ್ವಿಚಕ್ರ ವಾಹನ ಸಂಚರಿಸುತ್ತವೆ. ರಸ್ತೆ ಮಧ್ಯೆ ನಿರ್ಮಾಣವಾದ ಈ ಕಂದಕದಿಂದ ವಾಹನ ಸವಾರರಲ್ಲಿ, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ರಾತ್ರಿ ಸಮಯದಲ್ಲಿ ಅಪಘಾತಗಳು ನಡೆಯುವ ಸಂಭವವಿದೆ ಎಂದು ಸ್ಥಳೀಯ ಸಾಯಬಣ್ಣ ಎಂಟಮಾನ ದೂರಿದ್ದಾರೆ.
ಹಲವು ಗ್ರಾಮಗಳನ್ನು, ಹೊಲಗಳನ್ನು ಸಂಪರ್ಕಿಸುವ ಮಾರ್ಗದ ಮಧ್ಯೆ ಇರುವ ಈ ಚರಂಡಿ ಮೇಲೆ ಬೃಹತ್ ಕಂದಕ ನಿರ್ಮಾಣವಾಗಿ ಹಲವು ದಿನ ಗತಿಸಿದರೂ ಸಂಬಂಧಿತ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಪಾದಾಚಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಕಗಳಲ್ಲದೆ ಅಕ್ಕಪಕ್ಕದಲ್ಲಿ ಇರುವ ಚರಂಡಿಗಳು ಸಹ ತುಂಬಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿವೆ. ಇಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ. ಕೂಡಲೇ ರಸ್ತೆ ಮಧ್ಯೆ ನಿರ್ಮಾಣವಾದ ಈ ಕಂದಕಗಳನ್ನು ಮುಚ್ಚಿ, ಚರಂಡಿ ಸ್ವತ್ಛಗೊಳಿಸಲು ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.