ರಾಯಚೂರು: ಮಂತ್ರಾಲಯ- ರಾಯಚೂರು ಹೆದ್ದಾರಿಯಲ್ಲಿ ಈಚೆಗೆ ತೆಲಂಗಾಣ ಸಾರಿಗೆ ಬಸ್ ಹರಿದು ಮೃತಪಟ್ಟ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ರಸ್ತೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಯರಗೇರಾದಲ್ಲಿ ಜೆಡಿಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಮೃತ ಬಾಲಕಿ ಭಾವಚಿತ್ರದೊಂದಿಗೆ ರಸ್ತೆಯಲ್ಲೇ ಧರಣಿ ಕುಳಿತ ಪ್ರತಿಭಟನಾಕಾರರು, ಬಳಿಕ ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆರು ವರ್ಷದ ಅಂಕಿತಾ ಶಾಲೆಗೆ ಹೋಗುವಾಗ ತೆಲಂಗಾಣದ ಸಾರಿಗೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದಕ್ಕೆ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದೇ ಕಾರಣ. ಬಾಲಕಿಯನ್ನು ಕಳೆದುಕೊಂಡ ಬಡ ಕುಟುಂಬ ಸಾಕಷ್ಟು ದುಖಃದಲ್ಲಿದ್ದು, ಕೂಡಲೇ ಅವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಮುಖ್ಯ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ರಸ್ತೆ ಪಕ್ಕದಲ್ಲೇ ಇದ್ದು, ಬೆಳಗ್ಗೆ-ಸಂಜೆ ಮಕ್ಕಳು ಓಡಾಡುತ್ತಾರೆ. ಆದರೆ, ಈ ಹೆದ್ದಾರಿಯ ಕರ್ನೂಲ್ ಕ್ರಾಸ್ ನಿಂದ ದರ್ಗಾವರೆಗೆ ಯಾವುದೇ ರಸ್ತೆ ತಡೆ, ಹೈಲೇಟರ್, ಸೂಚನಾಫಲಕಗಳು, ರೋಡ್ ರೆಫ್ಟ್ ಲೆಕ್ಚರ್ ಅಳವಡಿಸಿಲ್ಲ. ಈ ಕೂಡಲೇ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಈ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ರವಿ ಪಾಟೀಲ್, ನಿಜಾಮುದ್ದಿನ್, ಜಾಫರ್ ಅಲಿ ಪಾಟೀಲ್, ರವಿ ತಾತ, ಲಕ್ಷ್ಮಣ ಪಾಟೀಲ್, ವಿದ್ಯಾನಂದ ರೆಡ್ಡಿ, ಜಗದೀಶ್ ರೆಡ್ಡಿ, ನರಸಿಂಹ ನಾಯಕ, ಈರಣ್ಣ ನಾಯಕ, ಅಪ್ಸರ್ ಸಾಹೇಬ್, ನರಸಿಂಹ, ಮಲ್ಲೇಶ, ವೀರೇಶ ಗಿಲ್ಲೆಸುಗೂರು, ರಾಘಪ್ಪ ನಾಯಕ, ಶಿವರಾಮರೆಡ್ಡಿ ದುಗನೂರ, ಸಲಿಂ, ಬಸಣ್ಣ ನಾಯಕ, ಶ್ರೀನಿವಾಸ್ ರೆಡ್ಡಿ ಇದ್ದರು.