ನವದೆಹಲಿ: ಪರಿಸರಕ್ಕೂ, ಆರೋಗ್ಯಕ್ಕೂ ನಡುವೆ ಅವಿನಾಭಾವ ಸಂಬಂಧವಿದೆ. ಪರಿಸರ ಮಾಲಿನ್ಯದ ಹೆಚ್ಚಳವು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಹಳೆಯ ಹಾಗೂ ಮಾಲಿನ್ಯಕಾರಕ ವಾಹನಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಮಾಡಿದೆ.
ಈ ಹಿಂದೆಯೇ ಪ್ರಸ್ತಾಪಿಸಿರುವಂತೆ, ಈ ಬಜೆಟ್‌ನಲ್ಲಿ “ವಾಹನ ಗುಜರಿ ನೀತಿ’ಯನ್ನು ಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಅದರಂತೆ, 20 ವರ್ಷ ದಾಟಿರುವ ಖಾಸಗಿ ವಾಹನಗಳು ಹಾಗೂ 15 ವರ್ಷ ತುಂಬಿರುವ ವಾಣಿಜ್ಯ ವಾಹನಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಅಂದರೆ, ಖಾಸಗಿ ವಾಹನಗಳು 20 ವರ್ಷ ತುಂಬಿ ದೊಡನೆ, ವಾಣಿಜ್ಯ ವಾಹನಗಳು 15 ವರ್ಷ ದಾಟಿದೊಡನೆ ಫಿಟ್ ನೆಸ್ ಪರೀಕ್ಷೆ’ಗೆ ಒಳಪಡಬೇಕಾಗುತ್ತದೆ. ಇದರಿಂದಾಗಿ ಇಂಧನ ದಕ್ಷತೆಯ ಹಾಗೂ ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ಸಿಗುವುದರ ಜೊತೆಗೆ, ದೇಶದ ಆಮದಿನ ಬಿಲ್ ಕೂಡ ಕಡಿಮೆಯಾಗುತ್ತದೆ.
ಅನುಕೂಲತೆಗಳೇನು?:ದೇಶದಲ್ಲಿನ ವಾಯುಮಾಲಿನ್ಯಕ್ಕೆ ಹಳೆಯ ವಾಹನಗಳೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಇಂಥ ಅನೇಕ ವಾಹನಗಳು ಸರಿಯಾಗಿ ನಿರ್ವಹಣೆಯಾಗದೇ, ರಸ್ತೆಗಳಲ್ಲಿ ಓಡಾಡಲು ಅರ್ಹವಲ್ಲದ ಸ್ಥಿತಿಯಲ್ಲಿವೆ. ಇವುಗಳನ್ನು ರಸ್ತೆಗಿಳಿಸಿದರೆ ಮಾಲಿನ್ಯ ಹೆಚ್ಚಳದ ಜೊತೆಗೆ, ಹೆಚ್ಚಿನ ಇಂಧನವೂ ವೆಚ್ಚವಾಗುತ್ತದೆ ಮತ್ತು ಇವುಗಳಲ್ಲಿ ಸಂಚರಿಸುವುದು ಸುರಕ್ಷಿತವೂ ಅಲ್ಲ. ಹೊಸ ಸಂಚಾರ ರದ್ದಾದರೆ, ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ:ಮಂಗಳೂರು: ಎಸಿಬಿ ದಾಳಿ ಅಂತ್ಯ; ಕೋಟ್ಯಾಂತರ ರೂಪಾಯಿ ಆಸ್ತಿ ಪತ್ತೆ !
ಅಲ್ಲದೆ,ವಾಹನವನ್ನು ಗುಜರಿಗೆ ನೀಡುವವರು ಮತ್ತೆ ಹೊಸ ವಾಹನ ಖರೀದಿಸುತ್ತಾರೆ. ಒಟ್ಟಾರೆಯಾಗಿ ಈ ವಾಹನ ಗುಜರಿ ನೀತಿ ಯಿಂದ 10 ಸಾವಿರ ಕೋಟಿ ರೂ.ಗಳಷ್ಟು ಹೊಸ ಬಂಡವಾಳ ಹೂಡಿಕೆ ಆಗುತ್ತದೆಯಲ್ಲದೇ, ಇದು 50 ಸಾವಿರದಷ್ಟು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ.