Advertisement

ರಸ್ತೆ ಬದಿ ಆಹಾರ ಆರೋಗ್ಯಕ್ಕೆ ಹಾನಿಕರ

12:42 PM Feb 21, 2020 | Suhan S |

ಅರಸೀಕೆರೆ: ಇಂದಿನ ಯಾಂತ್ರೀಕೃತ ಜೀವನದಲ್ಲಿ ಮನುಷ್ಯ ಸಮಯದ ಅಭಾವ ಮತ್ತು ಬಾಯಿ ರುಚಿಗೆ ಮರುಳಾಗಿ ಫಾಸ್ಟ್‌ ಫ‌ುಡ್‌ ಸಂಸ್ಕೃತಿಗೆ ಮಾರುಹೋಗಿ ಅನಾರೋಗ್ಯಕ್ಕೆ ಆಹ್ವಾನ ನೀಡುತ್ತಿದ್ದಾನೆ.

Advertisement

ಹಾನಿಕಾರಕ ಪದಾರ್ಥಗಳ ಬಳಕೆ: ನಗರದ ವಿವಿಧ ಹೋಟೆಲ್‌ಗ‌ಳಲ್ಲಿ ಮತ್ತು ಗಾಡಿಗಳಲ್ಲಿ ಇಡ್ಲಿ ಮಾಡುವಾಗ ಬಟ್ಟೆಯ ಬದಲಿಗೆ ಪ್ಲಾಸ್ಟಿಕ್‌ ಬಳಸುವುದು, ಬೊಂಡಾ, ವಡೆ, ಬಜ್ಜಿ ಇನ್ನಿತರ ಕರಿದ ಪದಾರ್ಥಗಳನ್ನು ತಯಾರಿಸಲು ಕಳಪೆ ಗುಣಮಟ್ಟದ ಹಾಗೂ ಮರುಬಳಕೆ ಎಣ್ಣೆಯನ್ನು ಬಳಸುವುದು, ರುಚಿಗಾಗಿ ಟೇಸ್ಟಿಂಗ್‌ ಪೌಡರ್‌, ಹಾನಿಕಾರಕ ಬಣ್ಣಗಳನ್ನು ಬಳಸುವುದರಿಂದ ಕ್ಯಾನ್ಸರ್‌ ಮೊದಲಾದ ರೋಗಗಳು ಬರುವ ಸಾಧ್ಯತೆಯಿರುತ್ತದೆ.

ಅನುಷ್ಠಾನವಾಗದ ಆಹಾರ ಸುರಕ್ಷತಾ ಕಾಯ್ದೆ: ರಾಜ್ಯ ಸರ್ಕಾರ 2011 ರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಜಾರಿಗೆ ತಂದಿದ್ದು, ಕಡ್ಡಾಯವಾಗಿ ಸಂಬಂಧ ಪಟ್ಟ ಇಲಾಖೆಯಿಂದ ಮಾಲೀಕರು ನೋಂದಣಿ ಮಾಡಿಸಿ ಪರವಾನಗಿ ಪಡೆದು ವ್ಯಾಪಾರ ವ್ಯವಹಾರ ನಡೆಸಬೇಕಾಗಿದೆ. ತಪ್ಪಿದಲ್ಲಿ ಲಕ್ಷಾಂತರ ರೂ. ದಂಡವನ್ನು ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ. ಇಂತಹ ಕಾಯ್ದೆ ಜಾರಿಯಾಗಿದ್ದರೂ ರಸ್ತೆ ಬದಿಯ ತಿಂಡಿ ಗಾಡಿಗಳು ಗೂಡಂಗಡಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಶುದ್ಧ ಕುಡಿಯುವ ನೀರು ಸರಬರಾಜು ಮಾಡದೇ ಇರುವುದು. ತಟ್ಟೆ ಲೋಟಗಳನ್ನೇ ಸರಿಯಾಗಿ ತೊಳೆಯದಿರುವುದು. ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿರುವುದು. ಕಲಬೆರಕೆ ಟೀ ಪುಡಿ ಬಳಸುತ್ತಿರುವುದರಿಂದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ಎಲ್ಲೆಲ್ಲಿ ತಿಂಡಿ, ತಿನಿಸು ಮಾರಾಟ? : ನಗರದ ರೈಲ್ವೆ ನಿಲ್ದಾಣ ಮತ್ತು ಬಸ್‌ ನಿಲ್ದಾಣದ ರಸ್ತೆಗಳ ಅಕ್ಕಪಕ್ಕದಲ್ಲಿ ಹಾಗೂ ಪ್ರಮುಖ ವೃತ್ತಗಳ ಬಳಿಯಲ್ಲಿ ತಲೆಯೆತ್ತಿರುವ ರಸ್ತೆ ಬದಿಯ ತಿಂಡಿ ಗಾಡಿಗಳು ಹಾಗೂ ಗೂಡಂಗಡಿಗಳಲ್ಲಿ ತಯಾರಿಸುವ ಇಡ್ಲಿ, ವಡೆ, ಪೂರಿ, ಬೋಡಾ, ಚಿತ್ರಾನ್ನ ಮೊಸರನ್ನ, ಪಲಾವ್‌ ಮತ್ತು ಕೋಳಿ ಮಾಂಸದ ಆಹಾರ ಜೊತೆಗೆ ಮೀನು ಮೊಟ್ಟೆಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ.

ಚರಂಡಿ ಪಕ್ಕದಲ್ಲಿ ಪಾನಿಪುರಿ ಮಾರಾಟ: ನಗರದ ಅನೇಕ ಕಡೆಗಳಲ್ಲಿ ಚರಂಡಿಗಳ ಪಕ್ಕದಲ್ಲಿಯೇ ಪಾನಿಪೂರಿ ಮಾರಾಟವನ್ನು ಮಾಡುತ್ತಿದ್ದಾರೆ. ಚರಂಡಿಯಲ್ಲಿನ ದುರ್ವಾಸನೆಯನ್ನು ಲೆಕ್ಕಿಸದೇ ಜನರು ಅಲ್ಲಿಯೇ ಪಾನಿ ಪುರಿ ಸೇವನೆಗೆ ಮುಂದಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Advertisement

ಹೋಟೆಲ್‌ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಆರೋಗ್ಯ ಇಲಾಖೆಯಿಂದ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ತಿಂಡಿ ಗಾಡಿಗಳ ಮಾಲೀಕರು ನೋಂದಣಿ ಮಾಡಿಕೊಂಡಿಲ್ಲ. ಆಹಾರ ತಯಾರಿಕೆ ಹಾಗೂ ವಿತರಣೆಯಲ್ಲಿ ಸ್ವತ್ಛತೆ ಕಾಪಾಡಬೇಕು ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ತೆರಳಿ ಸೂಚನೆ ನೀಡಲಾಗಿದೆ. ಡಾ.ಜಿ.ಎಸ್‌. ನಾಗಪ್ಪ, ತಾಲೂಕು ಆಹಾರ ಸುರಕ್ಷತಾಧಿಕಾರಿ

ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರವನ್ನು ಗ್ರಾಹಕರ ಎದುರೇ ತಯಾರಿಸಿ ಕೊಡುತ್ತಿದ್ದೇವೆ. ಸ್ವಚ್ಛತೆ ಕಾಪಾಡುವುದರೊಂದಿಗೆ ಶುದ್ಧ ಕುಡಿಯುವ ನೀರನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ನಗರಸಭೆ ಮತ್ತು ಆಹಾರ ಇಲಾಖೆಯಿಂದ ಪರವಾನಗಿ ಪಡೆಯಲು ಕಚೇರಿಗೆ ನಾವು ಅಲೆದಾಡಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ನಮಗೆ ಸೂಕ್ತ ಮಾರ್ಗದರ್ಶನ ಕೊರತೆ ಇದೆ. ಶಾಂತಕುಮಾರ್‌, ರಸ್ತೆ ಬದಿ ವ್ಯಾಪಾರಿ

 

-ರಾಮಚಂದ್ರ

Advertisement

Udayavani is now on Telegram. Click here to join our channel and stay updated with the latest news.

Next