ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಹತ್ತಿರ ಹಾಗೂ ಬೀಳಗಿ ಕ್ರಾಸ್ ಬಳಿ 218ರ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ರಸ್ತೆ ವಿಭಜಕ (ಡಿವೈಡರ್) ಯಾವುದೇ ಸೂಚನಾ ಫಲಕ, ರೇಡಿಯಂ ಇಲ್ಲದ ಪರಿಣಾಮ, ಹಲವಾರು ಅಪಘಾತಗಳಿಗೆ ಕಾರಣವಾಗುವ ಮೂಲಕ ಜೀವಬಲಿಗಾಗಿ ಕಾಯ್ದುಕುಳಿತಿದೆ.
ಬಾಡಗಂಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಡಿವೈಡರ್‌ಗೆ ಲಾರಿ ಡಿಕ್ಕಿ ಹೊಡೆದು ವಿಭಜಕದಲ್ಲಿ ಸಿಕ್ಕಿಕೊಂಡಿದೆ. ಘಟನೆ ನಡೆದು ನಾಲ್ಕು ದಿನ ಗತಿಸಿದರೂ ಕೂಡ ಇನ್ನೂ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿಲ್ಲ. ಪರಿಣಾಮ, ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಡಿವೈಡರ್‌ಗೆ ಅಪಘಾತಕ್ಕೊಳಗಾಗಿ ನಿಂತಿರುವ ಈ ವಾಹನಕ್ಕೆ ಟಕ್ಕರ್ ಕೊಡುವ ಸಾಧ್ಯತೆ ಹೆಚ್ಚಿದೆ. ಡಿವೈಡರ್‌ಗೆ ಅಪ್ಪಳಿಸಿದ ಈ ಲಾರಿ ರವುಗೊಳಿಸುವ ಮುನ್ನವೇ ಬಾಡಗಂಡಿ ಗ್ರಾಮದ ಬಳಿ ಹೊಸ ಕಾರು ಡಿವೈಡರ್‌ಗೆ ಅಪ್ಪಳಿಸಿದ ಘಟನೆ ನಡೆದಿದೆ. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಪದೆ, ಪದೆ ವಾಹನಗಳು ಡಿವೈಡರ್‌ಗೆ ಅಪ್ಪಳಿಸುತ್ತಿದ್ದರೂ ಕೂಡ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ಡಿವೈಡರ್‌ಗೆ ರೇಡಿಯಂ ಅಳವಡಿಸುವುದು ಹಾಗೂ ಸೂಚನಾ ಫಲಕ ಹಾಕುವ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ರಸ್ತೆ ವಿಭಜಕ ಕುರಿತು ರೇಡಿಯಂ, ನಾಮಫಲಕ ಹಾಕಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅನಾಹುತ ತಡೆಯಲು ಮುಂದಾಗಬೇಕೆಂದು ವಾಹನ ಸವಾರರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement
ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಆದರೆ, ಈ ರಸ್ತೆ ವಿಭಜಕಕ್ಕೆ ರೇಡಿಯಂ ಅಳವಡಿಸಿಲ್ಲ. ಅಲ್ಲದೆ, ರಸ್ತೆ ವಿಭಜಕ ಆರಂಭವಾಗುತ್ತದೆ ಎನ್ನುವ ಕುರಿತು ಮುಂಚಿತವಾಗಿ ಯಾವುದೇ ಎಚ್ಚರಿಕೆಯ ನಾಮಫಲಕ ಅಳವಡಿಸಿಲ್ಲ. ಪರಿಣಾಮ, ಕಳೆದೆರಡು ತಿಂಗಳಲ್ಲಿಯೇ ಸುಮಾರು ಹನ್ನೆರಡಕ್ಕೂ ಹೆಚ್ಚು ವಾಹನಗಳು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ .