Advertisement

ಕೆಎಸ್‌ಆರ್‌ಟಿಸಿಯಿಂದ ರಸ್ತೆ ಸುರಕ್ಷತಾ ಸಪ್ತಾಹ

06:33 AM Feb 10, 2019 | |

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಬೀದಿ ನಾಟಕ, ಕರಪತ್ರಗಳ ಹಂಚಿಕೆ, ಮಾಹಿತಿ ಕೈಪಿಡಿ, ನಿಗಮದ ಚಾಲಕರಿಗೆ ನೇತ್ರ ತಪಾಸಣಾ ಶಿಬಿರ, ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ತಿಳಿವಳಿಕೆ, ಕಾಲ್ನಡಿಗೆ ಜಾಥಾ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

Advertisement

ಮೊದಲಿಗೆ ಲಾಲ್‌ಬಾಗ್‌ ಮುಖ್ಯದ್ವಾರದಿಂದ ರಿಚ್‌ಮಂಡ್‌ ರಸ್ತೆವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಮಾರ್ಗದುದ್ದಕ್ಕೂ ರಸ್ತೆ ಸುರಕ್ಷತೆ ಕುರಿತ ಘೋಷಣೆಗಳು, ಕರಪತ್ರ ಹಂಚುವ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು. ನಂತರ ಪ್ರದರ್ಶಿಸಿದ “ಬದುಕಿ-ಬದುಕಿಸಿ’ ಬೀದಿ ನಾಟಕ ಅಲ್ಲಿದ್ದವರ ಗಮನ ಸೆಳೆಯಿತು.

ಅಲ್ಲದೆ, ಕೆಂಪೇಗೌಡ ಬಸ್‌ ನಿಲ್ದಾಣ ವಿಭಾಗದ ವತಿಯಿಂದಲೂ ಸುರಕ್ಷತೆ-ಜೀವನರಕ್ಷೆ ಬೀದಿ ನಾಟಕವನ್ನುಏರ್ಪಡಿಸಲಾಗಿತ್ತು. ನಾಟಕ ವೀಕ್ಷಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಈ ಮಾದರಿಯ ಬೀದಿ ನಾಟಕವನ್ನು ಎಲ್ಲಾ ಭಾಗಗಳಲ್ಲಿ ಹಾಗೂ ಬಸ್‌ ನಿಲ್ದಾಣಗಳಲ್ಲೂ ಪ್ರದರ್ಶನ ಮಾಡಬೇಕು ಸಿಬ್ಬಂದಿಗೆ ಸೂಚಿಸಿದರು.

ನಾರಯಣ ನೇತ್ರಾಲಯದಿಂದ ಚಾಲನಾ ಸಿಬ್ಬಂದಿಗೆ ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರ ನಡೆಸಲಾಯಿತು. ನೂರಾರು ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಂಡರು. ಇದಲ್ಲದೆ, ವಾಹನ ನಿಲ್ದಾಣಗಳಲ್ಲಿ ಸುರಕ್ಷತೆ ಬಗ್ಗೆ ಧ್ವನಿವರ್ಧಕಗಳ ಮೂಲಕ ಪ್ರಚಾರ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ನಿಗಮದ ಮಂಡ್ಯ, ಕೋಲಾರ, ಚಿಕ್ಕಮಗಳೂರು ವಿಭಾಗಗಳಲ್ಲಿ ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಉಪ ಪೊಲೀಸ್‌ ಆಯುಕ್ತ ಕೆ.ವಿ. ಜಗದೀಶ್‌ ಮತ್ತಿತರರು ಭಾಗವಹಿಸಿದ್ದರು.

ಕೈಪಿಡಿ ವಿತರಣೆ: ಇದೇ ವೇಳೆ “ನಿಧಾನ, ನಿಮಗಾಗಿ ಕಾಯುತ್ತಿದ್ದಾರೆ ನಿಮ್ಮವರು!’ ಶೀರ್ಷಿಕೆಯ ಮಾಹಿತಿ ಕೈಪಿಡಿ ಹೊರತರಲಾಯಿತು. ಇದನ್ನು ಸಾರ್ವಜನಿಕರಿಗೂ ವಿತರಿಸಲಾಯಿತು. ಇದರ ಜತೆಗೆ ನಿಗಮದ ಎಲ್ಲಾ ವಿಭಾಗಗಳಿಂದ ಅಪಘಾತ ಹಿನ್ನೆಲೆಯಿರುವ ಚಾಲಕರನ್ನು ಗುರುತಿಸಿ, ಮತ್ತಷ್ಟು ಪರಿಣಾಮಕಾರಿಯಾದ ತರಬೇತಿ ನೀಡುವ ಕೆಲಸವೂ ವಾರವಿಡೀ ನಡೆಯಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next