ಕುದೂರು: ತಿಪ್ಪಸಂದ್ರ ಹೋಬಳಿ ಸಮೀಪವಿರುವ ಡಿಸಿಎಂ ಅಶ್ವತ್ಥ ನಾರಾಯಣ್ ತವರೂರಾದ ಚಿಕ್ಕಕಲ್ಯಾ ಗ್ರಾಮದ ರಸ್ತೆಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲಿ ನೀರು ನಿಂತು ಕೆಸರು ಗದ್ದೆಯಾಗಿ ಓಡಾಡಲಾಗದ ಪರಿಸ್ಥಿತಿ ಎದುರಾಗುತ್ತದೆ.
ತಿಪ್ಪಸಂದ್ರ ಹೋಬಳಿ ಸಂಕೀಘಟ್ಟ ಗ್ರಾಪಂ ವ್ಯಾಪ್ತಿಯ ಚಿಕ್ಕಕಲ್ಯಾ ಗ್ರಾಮ ಕಂದಾಯ ದಾಖಲೆಗೆ ಸೇರಿದಾಗಿನಿಂದಲೂ ಡಾಂಬರು ಭಾಗ್ಯ ಕಾಣದೆ ದುರ್ಗತಿಗೆ ಬಂದಿದೆ. ಚಿಕ್ಕಕಲ್ಯಾ ಗ್ರಾಮದಿಂದ ಸುಮಾರು 3 ಕಿ.ಮೀ ರಸ್ತೆ ಸ್ಥಿತಿ ಚಿಂತಾಜನಕವಾಗಿದ್ದು ಇಲ್ಲಿನ ಜನರಿಗೆ ರಸ್ತೆ ಸವಾಲಾಗಿ ಮಾರ್ಪಟ್ಟಿದೆ.
ಹೈನುಗಾರಿಕೆ ಕಿರಿಕಿರಿ: ಹೆಚ್ಚಾಗಿ ಹೈನುಗಾರಿಕೆ ನೆಚ್ಚಿಕೊಂಡಿರುವ ಮಹಿಳೆಯರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕಲು ಬರಬೇಕೆಂದರೆ ಕೆಸರು ರಸ್ತೆಯಲ್ಲೇ ಜೀವ ಬಿಗಿ ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿ ಬಂದೋದಗಿದೆ. ತಲೆ ಮೇಲೆ ಹಾಲಿನ ಕ್ಯಾನ್ ಹಿಡಿದು ಒಂದೆರೆಡು ಕಿ.ಮೀ ನಡೆಯುವ ಮಹಿಳೆಯರು ಇಲ್ಲಿನ ರಸ್ತೆಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾರೆ. ಇನ್ನು ಬೇಸಿಗೆ , ಚಳಿಗಾಲದಲ್ಲೂ ಈ ರಸ್ತೆ ಗುಂಡಿಗಳದ್ದೇ ಕಾರು ಬಾರಾಗಿ ವಾಹನ ಸಂಚಾರಕ್ಕೆ ತಡೆ ತಂದಿದೆ.
ತಲೆ ಕೆಡಿಸಿಕೊಳ್ಳದ ನಾಯಕರು: ಇನ್ನು ರಾತ್ರಿ ವೇಳೆ ವಾಹನಗಳಿಂದ ಬಿದ್ದು ಸವಾರರು ಗಾಯಗೊಂಡಿರುವ ಘಟನೆ ಗಳು ಸಾಕಷ್ಟಿವೆ. ತುರ್ತು ವೇಳೆಯಲ್ಲಿ ಯಥಾಸ್ಥಿತಿ ಗರ್ಭೀಣಿಯರು , ವೃದ್ಧರು, ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ನರಕಯಾತನೆ ಪಡಬೇಕಾಗಿದೆ. ಇಲ್ಲಿಯವರೆಗೂ ಯಾವೊಬ್ಬ ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ.
ಕಾಳಜಿಯೇ ಇಲ್ಲ: ಸಂಕೀಘಟ್ಟ ಗ್ರಾಪಂಗೆ ಸೇರುವ ಈ ಹಳ್ಳಿ ರಸ್ತೆ ರಿಪೇರಿ ಮಾಡುವ ಗೋಜಿಗೆ ಸ್ಥಳೀಯ ಜನ ಪ್ರತಿನಿಧಿಗಳು ಹೋಗಿಲ್ಲ. ಇದೇ ಭಾಗದಿಂದ ಆಯ್ಕೆಯಾದ ಜಿಪಂ ಸದಸ್ಯರು ರಸ್ತೆಯಲ್ಲಿ ದಿನ ನಿತ್ಯ ಓಡಾಡುತ್ತಾರೆ. ಕನಿಷ್ಠ ಪಕ್ಷ ಈ ಭಾಗದಲ್ಲಿ ಜನರು ತನಗೆ ಮತ ಹಾಕಿ ಚುನಾಯಿಸಿದ್ದಾರೆ. ಈ ಭಾಗದ ಜನರ ಅಭಿವೃದ್ಧಿಗೆ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುವ ಕಾಳಜಿಯೇ ಇಲ್ಲದಂತಾಗಿದೆ. ಥ್
ಜೀವ ಬಿಗಿ ಹಿಡಿದು ಸಂಚರಿಸಬೇಕು: ತಿಪ್ಪಸಂದ್ರ ಹೋಬಳಿ ಹಿಂದುಳಿದ ಹೋಬಳಿ ಕೇಂದ್ರ ಕುದೂರಿಗೆ ಹೋಲಿಸಿದ್ದಲ್ಲಿ ಅಷ್ಟೇನು ಪ್ರಗತಿಯಾಗಿಲ್ಲ. ಆದ ಕಾರಣ ಪ್ರತಿ ನಿತ್ಯ ಸಾವಿರಾರು ಮಂದಿ ಶಿಕ್ಷಣ, ವ್ಯಾಪಾರ, ವೈದ್ಯಕೀಯ ಸೌಲಭ್ಯಕ್ಕೆ ಕುದೂರನ್ನೇ ಅವಲಂಬಿಸಿದ್ದಾರೆ. ನಿತ್ಯ ಗುಂಡಿ ರಸ್ತೆಯಲ್ಲಿ ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ. ಇನ್ನಾದರೂ ಜಿಪಂ ಆಗಲಿ, ಲೋಕೋಪಯೋಗಿ ಇಲಾಖೆಯಾಗಲಿ ,ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಡಾಂಬರು ಹಾಕಿಸಿ ಮುಕ್ತಿ ಒದಗಿಸುವರೆ ಎಂದು ಕಾದು ನೋಡಬೇಕಾಗಿದೆ.
-ಕೆ.ಎಸ್.ಮಂಜುನಾಥ್