Advertisement

ಹದಗೆಟ್ಟ ಗಾಂಧಿನಗರ-ನಡಾಯಿಪಲ್ಕೆ ಸಂಪರ್ಕ ರಸ್ತೆ

12:24 AM Sep 16, 2019 | Team Udayavani |

ಬಜಗೋಳಿ (ಪಳ್ಳಿ ): ನಲ್ಲೂರು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ-ನಡಾಯಿಪಲ್ಕೆ ಸಂಪರ್ಕ ರಸ್ತೆಯು ಹೊಂಡ ಗುಂಡಿಗಳಿಂದ ಆವೃತವಾಗಿ ಸಂಚಾರಕ್ಕೆ ದುಸ್ತರವಾಗಿದೆ.

Advertisement

ಈ ರಸ್ತೆಯು ಸುಮಾರು 3.5 ಕಿ.ಮೀ. ಉದ್ದವಿದ್ದು, ಡಾಮರು ಕಾಣದೆ ಸುಮಾರು 15 ವರ್ಷಗಳೇ ಕಳೆದಿವೆ. ರಸ್ತೆಯ ಆರಂಭದ ಭಾಗದಲ್ಲಿ ಸುಮಾರು 100 ಮೀ. ಮತ್ತು ಮಧ್ಯ ಭಾಗದಲ್ಲಿ 100 ಮೀ. ಸೇರಿ ಒಟ್ಟು 200ಮೀ.ಗಳಷ್ಟು ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಉಳಿದ ರಸ್ತೆ ಮಣ್ಣಿನ ರಸ್ತೆ ಯಂತಾಗಿ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸಂಪರ್ಕ ರಸ್ತೆ
ಈ ಭಾಗದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಎಸ್‌. ಟಿ. ಕಾಲನಿಯೂ ಇದೆ. ನಡಾಯಿಪಲ್ಕೆ ಗ್ರಾಮಸ್ಥರು ಬಜಗೋಳಿ ಪೇಟೆ ಸಂಪರ್ಕಿಸಲು ಇದೇ ಮುಖ್ಯ ರಸ್ತೆ. ತುರ್ತು ಸಂದರ್ಭ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಲೂ ಈ ರಸ್ತೆಯ ಮೂಲಕವೇ ಸಾಗಬೇಕು. ಬಜಗೋಳಿ, ಗುರ್ಗಲ್‌ಗ‌ುಡ್ಡೆ ಮೂಲಕ ಮಾಳಕ್ಕೆ ತೆರಳಲು ಗಾಂಧಿನಗರ, ನಡಾಯಿಪಲ್ಕೆಯ ಬಹುತೇಕ ಗ್ರಾಮಸ್ಥರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ರಸ್ತೆಯ ಅವ್ಯವಸ್ಥೆಯನ್ನು ಕಂಡು ಆಟೋ ಚಾಲಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ. ಮಳೆಗಾಲದಲ್ಲಿ ಕೆಸರು, ಬೇಸಗೆಯಲ್ಲಿ ಧೂಳು ಆವರಿಸುವ ಕಾರಣ ಸಾರ್ವಜನಿಕರು ರಸ್ತೆ ಅವ್ಯವಸ್ಥೆ ಕುರಿತು ಹಿಡಿ ಶಾಪ ಹಾಕುವಂತಾಗಿದೆ.

ರಸ್ತೆ ದುರಸ್ತಿಪಡಿಸುವಂತೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆಗಳ ಗಮನ ಸೆಳೆಯಲಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನಾದರೂ ಎಚ್ಚೆತ್ತು ತತ್‌ಕ್ಷಣ ರಸ್ತೆಯ ಡಾಮರೀಕರಣಕ್ಕೆ ಮುಂದಾಗುವ ಮೂಲಕ ದಶಕಗಳ ಬೇಡಿಕೆ ಈಡೇರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಪ್ರಸ್ತಾವನೆ ಸಲ್ಲಿಕೆ
ರಸ್ತೆ ಕಾಮಗಾರಿ ಬಗ್ಗೆ 50 ಲಕ್ಷ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಮಂಜೂರುಗೊಂಡ ಬಳಿಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು.
-ಲೋಕೇಶ್‌ ಶೆಟ್ಟಿ, ಅಧ್ಯಕ್ಷರು, ನಲ್ಲೂರು ಗ್ರಾ.ಪಂ.

ಶಾಶ್ವತ ಪರಿಹಾರ ಬೇಕು
ಬಹುಕಾಲದ ಬೇಡಿಕೆಯಾದ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸಬೇಕು.
-ಹರೀಶ್‌ ನಡಾಯಿಪಲ್ಕೆ, ಗ್ರಾಮಸ್ಥರು

ಶೀಘ್ರ ಡಾಮರೀಕರಣಗೊಳಿಸಿ
ದಶಕಗಳ ಬೇಡಿಕೆಯಾದ ಗಾಂಧಿನಗರ-ನಡಾಯಿಪಲ್ಕೆ ಸಂಪರ್ಕ ರಸ್ತೆಯನ್ನು ಶೀಘ್ರ ಡಾಮರೀಕರಣಗೊಳಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸಬೇಕು.
– ಅಜಿತ್‌, ನಡಾಯಿಪಲ್ಕೆ

– ಸಂದೇಶ್‌ ಕುಮಾರ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next