Advertisement

ಬಲ್ನಾಡು–ಬಾಯಾರು-ಕುಂಡಡ್ಕ ರಸ್ತೆಗಿಲ್ಲ ದುರಸ್ತಿ ಭಾಗ್ಯ 

07:48 PM Sep 24, 2021 | Team Udayavani |

ಅವಳಿ ಗ್ರಾಮಗಳನ್ನು ಸಂಪರ್ಕಿಸುವ ಬಲ್ನಾಡು-ಬಾಯಾರು-ಕುಂಡಡ್ಕ ರಸ್ತೆಗೆ ಸುಮಾರು 2 ದಶಕಗಳಿಂದ ದುರಸ್ತಿ ಭಾಗ್ಯವಿಲ್ಲ.  ದಿನಕ್ಕೆ ಸಾವಿರಾರು ಮಂದಿ ಓಡಾಡುವ ಈ ರಸ್ತೆಯಲ್ಲಿನ ಸಂಚಾರ ನರಕ ಸದೃಶ ಎನ್ನುವ ಗೋಳು ಸ್ಥಳೀಯರದ್ದು.  ಇಲ್ಲಿನ ಸಮಸ್ಯೆಗಳ ಚಿತ್ರಣ ಒಂದು ಊರು; ಹಲವು ದೂರು ಅಂಕಣದಲ್ಲಿ.

Advertisement

ಪುತ್ತೂರು: ಅವಳಿ ಗ್ರಾಮಗಳನ್ನು ಸಂಪರ್ಕಿಸುವ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುವ ಬಲ್ನಾಡು–ಬಾಯಾರು-ಕುಂಡಡ್ಕ ರಸ್ತೆ ದುರಸ್ತಿ ಕಾಣದೇ ಎರಡು ದಶಕಗಳೇ ಕಳೆಯಿತು.

ಪುತ್ತೂರಿನಿಂದ ಬಲ್ನಾಡು-ಮಾರ್ಗವಾಗಿ ಕುಂಡಡ್ಕ-ಪುಣಚ ರಸ್ತೆಗೆ ಸಂಪರ್ಕಿಸುವ ರಸ್ತೆಯ ಗೋಳಿದು. ಪಳೆಯುಳಿಕೆಯಂತೆ ಕಾಣುವ ಈ ರಸ್ತೆಯಲ್ಲಿ ಪಯಣಿಸುವುದೆಂದರೆ ಜೀವ ಪಣಕ್ಕಿಟ್ಟ ಹಾಗೆ ಅನ್ನುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಅವಳಿ ಗ್ರಾಮಕ್ಕೆ ಸಂಪರ್ಕ ರಸ್ತೆ:

ವಿಟ್ಲ ಮುಟ್ನೂರು ಹಾಗೂ ಕುಳ ಗ್ರಾಮಸ್ಥರು ಪುತ್ತೂರು ಸಂಪರ್ಕಿಸಲು ಈ ಮಾರ್ಗವನ್ನು ಬಳಸುತ್ತಾರೆ. ಈ ರಸ್ತೆ ದುರಸ್ತಿಯಾಗದೆ ಸುಮಾರು 20 ವರ್ಷಗಳೇ ಕಳೆದಿವೆ. ರಸ್ತೆಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು ಕೆಲವು ಕಡೆ ದ್ವಿಚಕ್ರ ವಾಹನಗಳು ಸಂಚರಿಸದ ಸ್ಥಿತಿ ಉಂಟಾಗಿದೆ. ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಜನಪ್ರತಿನಿಧಿ, ಇಲಾಖೆಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮಳೆಗಾಲದಲ್ಲಿ ಕೆಸರು, ಬೇಸಗೆ ಕಾಲದಲ್ಲಿ ಹೊಂಡದಲ್ಲಿ ಸಂಚರಿಸುವುದು ಇಲ್ಲಿನ ನಿತ್ಯದ ದುಸ್ಥಿತಿಯಾಗಿದೆ.

Advertisement

ಪ್ರಮುಖ ಸಂಪರ್ಕ ರಸ್ತೆ:

ಬಲ್ನಾಡಿನಿಂದ ನಾಟೆಕಲ್‌ ತನಕದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು 6 ಕಿ.ಮೀ. ದೂರದವರೆಗ ಈ ರಸ್ತೆ ಡಾಮರು ಕಂಡಿಲ್ಲ. ಈ ರಸ್ತೆ ಮೂಲಕ ದೇವಾಲಯ, ಶಾಲೆಗೆ ನೂರಾರು ಮಂದಿ ಸಂಚರಿಸುತ್ತಾರೆ. ಬಟ್ಟಿ ವಿನಾಯಕ ದೇವಾಲಯ, ಕುಂಡಡ್ಕ ವಿಷ್ಣುಮೂರ್ತಿ ದೇವಾಲಯಕ್ಕೆ ಸಂಪರ್ಕ ರಸ್ತೆಯಾಗಿಯೂ ಇದು ಸಹಕಾರಿ ಎನ್ನುತ್ತಾರೆ ಸ್ಥಳೀಯರು. ಉಜ್ತುಪಾದೆ, ನಾಟೆಕ್ಕಲ್‌ ಸರಕಾರಿ ಶಾಲೆಗೂ ಈ ರಸ್ತೆ ಮೂಲಕವೇ ಸಂಚರಿಸಬೇಕು. ಹೀಗಾಗಿ ಸಾರ್ವಜನಿಕವಾಗಿ ಇದೊಂದು ಅನಿವಾರ್ಯ ಎಂದೆನಿಸುವ ರಸ್ತೆಯಾಗಿದೆ. ಅಲ್ಲದೇ ಪುತ್ತೂರಿನಿಂದ ಬಲ್ನಾಡು-ಗ್ರಾ.ಪಂ. ವ್ಯಾಪ್ತಿಯ ವಿವಿಧ ಭಾಗಗಳಿಗೆ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಇದೇ ರಸ್ತೆ ಮೂಲಕವೇ ಸಂಚರಿಸುತ್ತಿದ್ದರೂ ಕಾಡುತ್ತಿರುವ ಗೋಳು ಅವರ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ.

ಬಸ್‌ ಓಡಾಟ :

ಈ ರಸ್ತೆಯಲ್ಲಿ ದಿನಂಪ್ರತಿ 2 ಸರಕಾರಿ ಬಸ್‌ನ ಓಡಾಟ ಇತ್ತು. ಲಾಕ್‌ಡೌನ್‌ ಕಾರಣದಿಂದ ಓಡಾಟ ಪುನರಾ ರಂಭಗೊಂಡಿಲ್ಲ. ಬಸ್‌ನ ದೃಷ್ಟಿಯಿಂದಲೂ ಇಲ್ಲಿ ಸಂಚಾರ ಸುಲಭವಲ್ಲ. ಈಗ ಮತ್ತೆ ಬಸ್‌ ಓಡಾಟಕ್ಕೆ ಅವಕಾಶ ಇದ್ದರೂ ಇಲ್ಲಿ ಸಂಚರಿಸುವುದು ಹೇಗೆ ಅನ್ನುವುದೇ ಚಾಲಕರ ಅಳಲು. ಈ ರಸ್ತೆಯಲ್ಲಿ ಬಸ್‌,  ಲಾರಿಯಂತಹ ಘನ ವಾಹನ ಸೇರಿದಂತೆ ನೂರಾರು ವಾಹನಗಳು ಸಂಚಾರಿಸುತ್ತವೆ. ಕುಂಡಡ್ಕವನ್ನು ಸಂಪರ್ಕಿಸುವ ಇಲ್ಲಿಯ ರಸ್ತೆಗಳು ಡಾಮರು ಕಾಮಗಾರಿ ಕಾಣದೇ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಪರ್ಯಾಯವಾಗಿ ಸುತ್ತು ಬಳಸಿ ತೆರಳುವವರೂ ಇದ್ದಾರೆ.

ಮೇಲ್ದರ್ಜೆಗೆ ಮನವಿ:

ಬಲ್ನಾಡು–ಬಾಯಾರು-ಕುಂಡಡ್ಕ ರಸ್ತೆಯನ್ನು ಜಿ.ಪಂ.ನಿಂದ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆಯು ಕೇಳಿ ಬಂದಿದೆ. ಇದರಿಂದ ಅನುದಾನ ದೊರೆತು ಅಭಿವೃದ್ದಿ ಸಾಧ್ಯವಾಗಲಿದೆ. ಈಗಾಗಲೇ ಶಾಸಕ ಸಂಜೀವ ಮಠಂದೂರು ದುರಸ್ತಿ ಕಾರ್ಯಕ್ಕೆ  50 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೆ ಕೋಟಿ ರೂ. ಮೀರಿದ ಅನುದಾನದ ಅಗತ್ಯವಿದೆ.

 

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next