Advertisement

ಹೊಲಗಳ ಸಂಪರ್ಕ ರಸ್ತೆ ನಿರ್ಮಿಸಲು ಒತ್ತಾಯ : ಉದ್ಯೋಗ ಖಾತ್ರಿಯಡಿ ಕಾಮಗಾರಿ ಕೈಗೊಳ್ಳಿ

02:57 PM Feb 28, 2022 | Team Udayavani |

ಆಳಂದ: ತಾಲೂಕಿನ ಗ್ರಾಮೀಣ ಭಾಗದ ರೈತರ ಹೊಲ, ಗದ್ದೆಗಳ ಮೂಲಕ ಸಾಗುವ ಶತಮಾನಗಳಿಗಿಂತ ಹಳೆಯದಾದ ಸಂಪರ್ಕ ರಸ್ತೆಗಳನ್ನು ಪುನರ್‌ ನಿರ್ಮಿಸಲು ರೈತರು ಒತ್ತಾಯಿಸಿದ್ದಾರೆ. ಹೊಲಕ್ಕೆ ತೆರಳುವ ರಸ್ತೆಗಳು ಹದ್ದಗೆಟ್ಟ ಪರಿಣಾಮ ಕೃಷಿಕರು ಸಮರ್ಪಕವಾಗಿ ಸಂಚರಿಸಲು ಸಾಧ್ಯವಾಗುತ್ತಿಲಲ. ಎಲ್ಲೆಡೆ ಹೊಲ, ಗದ್ದೆಗಳಿಗೆ ಸಾಗುವ ಇಕ್ಕಟ್ಟಿನಿಂದ ಕೂಡಿದ ರಸ್ತೆಗಳಲ್ಲಿ ತೆಗ್ಗು ದಿನ್ನೆ, ಮುಳ್ಳು ಕಂಟಿ, ಕಲ್ಲು ಬಂಡೆಗಳು ಇವೆ. ಇದರಿಂದಾಗಿ ಈ ರಸ್ತೆಗಳಲ್ಲಿ ಟ್ರ್ಯಾಕ್ಟರ್, ಜೀಪು, ಟಂಟಂ, ದ್ವಿಚಕ್ರದಂತ ವಾಹನಗಳು ಓಡಾಡದಂತೆ ಆಗಿದೆ ಎಂದು
ಗೋಳಾದ ರೈತ ಬಸವರಾಜ ಉಪ್ಪಿನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಬಿತ್ತನೆಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು, ಬೆಳೆದ ರಾಶಿ, ತರಕಾರಿ ತರಲು ತೊಂದರೆ ಆಗುತ್ತಿದೆ. 120ಕ್ಕೂ ಹೆಚ್ಚು ಹಳ್ಳಿಗಳು, ತಾಂಡಾ ಒಳಗೊಂಡ ಗ್ರಾಮಗಳಲ್ಲಿ ಹೊಲಗಳಿಗೆ ಸಮರ್ಪಕ ರಸ್ತೆಗಳಿಲ್ಲ. ಈ ರಸ್ತೆ ನಿರ್ಮಾಣಕ್ಕೆ ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಗ್ರಾಪಂಗಳ ಮೂಲಕ ಜಾರಿಯಿರುವ ಉದ್ಯೋಗ ಖಾತ್ರಿ ಅಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಅಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಸ್ತೆಗಾಗಿ ಪರದಾಟ: ತಾಲೂಕಿನ ಸಾಲೇಗಾಂವ ಹೊಲಗಳ ಮೂಲಕ ತೀರ್ಥ, ಮಂಟಕಿ, ಖಂಡಾಳ, ಖಜೂರಿ, ಚಿತಲಿ ಸಂಪರ್ಕ ಕಲ್ಪಿಸುವ ರಸ್ತೆ ಸಮರ್ಪಕವಾಗಿಲ್ಲ. ಪಡಸಾವಳಿ ಗ್ರಾಮದ
ಹೊಲಗಳಿಂದ ಸಾಗುವ ರಸ್ತೆ ದರ್ಗಾದಿಂದ ಸೀಮೆ ಯಲ್ಲಮ್ಮ ಗುಡಿಯ ಮಟಕಿ ರಸ್ತೆ 2 ಕಿ.ಮೀ, ಪಡಸಾವಳಿ ಕಂಬಾರ ಬಡಾವಣೆಯಿಂದ ನಿರಗುಡಿ ಸೀಮೆ ಹೊಲದವರೆಗಿನ 2 ಕಿ.ಮೀ ರಸ್ತೆಯ
ಸರಸಂಬಾ ಸೀಮೆ ವರೆಗಿನ ರಸ್ತೆ ಹಾಗೂ ಗೋಳಾ ಬಿ. ಗ್ರಾಮದಿಂದ ಭೀಮಳ್ಳಿ ರಸ್ತೆ ನಿರ್ಮಾಣವಾಗಬೇಕಿದೆ.

ಇದನ್ನೂ ಓದಿ : ವ್ಯಾಪಾರಕ್ಕೆ ಹಿಂದೇಟು: ಎಪಿಎಂಸಿ ಮತ್ತೆ ಸ್ತಬ್ಧ? ಠೇವಣಿ ಹಿಂಪಡೆಯುತ್ತಿರುವ ವರ್ತಕರು

ಹೆಚ್ಚುತ್ತಿವೆ ಅಪಘಾತ: ಮಾದನಹಿಪ್ಪರಗಾ ವಲಯದ ನಿಂಬಾಳನಿಂದ ಹೊಲಗಳ ಮೂಲಕ ಸಾಗುವ ಬಬಲಾದ, ಅರ್ಜುಣಗಿ ರಸ್ತೆ, ರೇವೂರ ರಸ್ತೆ, ಖೇಡ ಉಮ್ಮರಗಾ ಹೀಗೆ ನಾಲ್ಕು ರಸ್ತೆಗಳಾದರೆ ರೈತರಿಗೆ ಅನುಕೂಲವಾಗುತ್ತದೆ. ನಮ್ಮ ಹೊಲ ನಮ್ಮ ರಸ್ತೆ ಅಡಿಯಲ್ಲಿ ಕಾಮಗಾರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿ ಕಾಮಗಾರಿ ತಡೆಯಾಗಿದೆ. ಇದರಿಂದ ಅನೇಕ ಅಪಘಾತಗಳು ಸಂಭವಿಸಿವೆ. ಆದ್ದರಿಂದ ಕೂಡಲೇ ರಸ್ತೆ ನಿರ್ಮಿಸಬೇಕು ಎಂದು ತಾಪಂ ಮಾಜಿ ಸದಸ್ಯ ಬಸವರಾಜ ಸಾಣಕ ನಿಂಬಾಳ ಒತ್ತಾಯಿಸಿದರು.

Advertisement

ಸಮಸ್ಯೆ ಬಗೆಹರಿಸಿ: ತಾಲೂಕಿನ ಹಲವಾರು ಗ್ರಾಮಗಳ ಹೊಲಗದ್ದೆಗಳಿಗೆ ಸಂಚರಿಸುವ ರಸ್ತೆಗಳಿಗೆ ಕಾಯಕಲ್ಪ ಬೇಕಿದೆ. ಇನ್ನೂ ಅನೇಕ ಗ್ರಾಮಗಳಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ರಸ್ತೆ ಒಳಪಟ್ಟರೆ ಕೆಲವುಕಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ ನಗರೀಕಣ ಹಾಗೂ ಕೃಷಿ ಉತ್ಪಾದನೆ ಬೇಡಿಕೆ ಪೂರೈಕೆ ಮತ್ತು ಸಾರಿಗೆ ಹಿತದೃಷ್ಟಿಯಿಂದ ಸುಗಮ ಸಂಚಾರ ಅನಿವಾರ್ಯವಾಗಿದೆ. ಈ ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಆರೋಪ ಪ್ರತ್ಯಾರೋಪಗಳು ಕೇಳಿಬಂದಿವೆ. ಈಗಲಾದರೂ ಎಲ್ಲ ಪಕ್ಷದವರು ಹಾಗೂ ಅಧಿಕಾರಿಗಳು ಸೇರಿ ಹೊಲಗಳ ರಸ್ತೆ ಸಂಪರ್ಕ ಒದಗಿಸಲು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next