Advertisement

ಜಾಂಬ್ರಿ ಗುಹೆ ಸಂಪರ್ಕ ರಸ್ತೆಯ ದುಃಸ್ಥಿತಿ: ಪಂ. ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

03:19 PM Sep 22, 2020 | keerthan |

ಪಾಣಾಜೆ: ಐತಿಹಾಸಿಕ ಸ್ಥಳ ಜಾಂಬ್ರಿ ಗುಹೆಯನ್ನು ಸಂಪರ್ಕಿಸಿ ಅನಂತರ ಕೇರಳವನ್ನು ಸೇರುವ ಆರ್ಲಪದವು-ಕಡಂದೇಲು ರಸ್ತೆ ಸ್ಥಿತಿ ತೀರಾ ಶೋಚನೀಯವಾಗಿದೆ. ರಸ್ತೆ ಅಭಿವೃದ್ಧಿ ಮಾಡದಿದ್ದರೆ ಮುಂದಿನ ಪಂ.ಹಾಗೂ ಇತರ ಚುನಾವಣೆ ಬಹಿಷ್ಕಾರ ಮಾಡಲು ಇಲ್ಲಿನ ನಾಗರಿಕರು ತೀರ್ಮಾನಿಸಿ ಪಾಣಾಜೆ ಗ್ರಾಮದ ಮುಖ್ಯ ಪೇಟೆ ಆರ್ಲಪದವಿನಲ್ಲಿ ಬ್ಯಾನರ್‌ ಅಳವಡಿಸಿದ್ದಾರೆ.

Advertisement

ಪಾಣಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಆರ್ಲಪದವು-ಕಡಂದೇಲು ಮೂಲಕ ಕೇರಳವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಕಳೆದ 25 ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಮನವಿಗಳನ್ನು ನೀಡಿದ್ದಾರೆ. ವಿವಿಧ ಪಕ್ಷಗಳ ಶಾಸಕರು ಆಯ್ಕೆಯಾದರೂ ಈ ರಸ್ತೆ ಮಾತ್ರ ಅಭಿವೃದ್ಧಿಗೊಂಡಿಲ್ಲ. ಇದರಿಂದ ನೆರೆಯ ಕೇರಳ ರಾಜ್ಯದವರೂ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮಸಭೆ, ಸಾಮಾನ್ಯ ಸಭೆ, ಪ್ರತಿಭಟನೆಗೆ ಬೆಲೆ ಇಲ್ಲ
ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಇಲ್ಲಿನ ನಾಗರಿಕರು ಗ್ರಾಮಸಭೆಯಲ್ಲಿ ಮನವಿ ಮಾಡಿದರೂ ನಿರ್ಣಯ ಕೈಗೊಂಡರೂ ಪಂ. ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದರೂ ಪ್ರತಿಭಟನೆ ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಗಮನವೇ ಹರಿಸಿಲ್ಲ.

ರಸ್ತೆ ಅಭಿವೃದ್ಧಿ ಕಿಚ್ಚು
ಬಹುತೇಕ ಎಲ್ಲ ರಸ್ತೆಗಳು ಅಭಿವೃದ್ಧಿ ಗೊಳ್ಳುತ್ತಿವೆ. ಈ ರಸ್ತೆ ಮಾತ್ರ ಕಚ್ಚಾ ರಸ್ತೆಯಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಕೇರಳದ ಮುಳ್ಳೇರಿಯವನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ಚುನಾವಣೆ ಸಂದರ್ಭ ವಿವಿಧ ಪಕ್ಷಗಳ ನಾಯಕರು ಭರವಸೆ ನೀಡಿದ್ದರೂ ರಸ್ತೆ ಅಭಿವೃದ್ಧಿಗೊಳಿಸಿಲ್ಲ ಎಂಬ ಆರೋಪ ನಾಗರಿಕರಿಂದ ಕೇಳಿಬರುತ್ತಿದೆ. ಮತದಾನ ಮಾಡಬೇಕಾದರೆ ರಸ್ತೆ ಅಭಿವೃದ್ಧಿ ಮಾಡಿಸಬೇಕು. ಅಲ್ಲಿಯವರೆಗೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಆರ್ಲಪದವು-ಕಡಂದೇಲು ನಾಗರಿಕರು ಹಾಕಿದ ಬ್ಯಾನರ್‌ ಪಾಣಾಜೆ ಗ್ರಾಮದ ಕಡಂದೇಲು ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ರಾರಾಜಿಸುತ್ತಿದೆ.

Advertisement

ಊಹಾಪೋಹಗಳು
ಆರ್ಲಪದವಿನಿಂದ ಸುಮಾರು 1.50 ಕಿ. ಮೀ. ಅನಂತರ ಅರಣ್ಯ ಪ್ರದೇಶ ಬರುತ್ತದೆ. ಅರಣ್ಯ ಇಲಾಖೆಯವರು ರಸ್ತೆ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ರಾಜಕಾರಣ ಮತ್ತು ಅಧಿಕಾರಿಗಳಲ್ಲಿ ಅರಣ್ಯ ಇಲಾಖೆಯ ಅಭ್ಯಂತರ ಇದ್ದರೆ ಆರ್ಲಪದವುನಿಂದ 1 ಕಿ.ಮೀ.ರಸ್ತೆಯನ್ನು ಅಭಿವೃದ್ಧಿ ಗೊಳಿಸಬಹುದಿತ್ತಲ್ಲ ಎಂಬ ಮಾತುಗಳೂ ಇವೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶುಕ್ರವಾರ ನನ್ನ ಗಮನಕ್ಕೆ ಬಂದಿದೆ. ಬ್ಯಾನರ್‌ ಅನ್ನು ಅನುಮತಿ ಇಲ್ಲದೆ ಹಾಕಲಾಗಿದೆ. ಚುನಾವಣೆ ಘೋಷಣೆ ಆದ ಕೂಡಲೇ ಬ್ಯಾನರ್‌ ತೆಗೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಯಶಸ್‌ ಮಂಜುನಾಥ, ಆಡಳಿತಾಧಿಕಾರಿ, ಪಾಣಾಜೆ ಗ್ರಾ.ಪಂ

ಸುಮಾರು 1 ಕಿ.ಮೀ. ರಸ್ತೆ ಬಂಟಾಜೆ ರಕ್ಷಿತಾರಣ್ಯದ ಮೂಲಕ ಹಾದು ಹೋಗುತ್ತದೆ. ಅರಣ್ಯ ಕಾಯ್ದೆ ಪ್ರಕಾರ ನಿಯಮಾನುಸಾರ ರಸ್ತೆ ಅಭಿವೃದ್ಧಿ ಗೊಳಿಸಲು ಸಾಧ್ಯವಿದೆ. ಅರಣ್ಯ ಇಲಾಖೆಯಿಂದ ಯಾವುದೇ ಅಭ್ಯಂತರವಿಲ್ಲ. ಸಾರ್ವಜನಿಕರು ಅರಣ್ಯ ಇಲಾಖೆಯ ಮೇಲೆ ಅಪವಾದ ಮಾಡುವುದು ಸರಿಯಲ್ಲ.

-ಮೋಹನ, ಅರಣ್ಯ ಅಧಿಕಾರಿ, ಪಾಣಾಜೆ

Advertisement

Udayavani is now on Telegram. Click here to join our channel and stay updated with the latest news.

Next