ಕಾಪು: ಕಾರು ಢಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ರಾ. ಹೆ. 66ರ ಮೂಳೂರಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕಾಪುವಿನ ಹಿರಿಯ ಹುಲಿವೇಷ ನರ್ತಕ ದಿ| ಯೋಗೇಂದ್ರ ಸುವರ್ಣ ಅವರ ಪತ್ನಿ ಮೂಳೂರು ಮಹಾಲಕ್ಷ್ಮೀ ನಗರ ನಿವಾಸಿ ಲೀಲಾವತಿ ಸಾಲ್ಯಾನ್ (65) ಮೃತ ಮಹಿಳೆ.
ಬುಧವಾರ ಮಧ್ಯಾಹ್ನ ಮೂಳೂರು ಅಂಚೆ ಕಚೇರಿಗೆ ಬಂದು ನಗದು ತೆಗೆದು ರಾ. ಹೆ. 66ರ ರಸ್ತೆ ದಾಟಿ ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಮೇಲೆ ಹಾರಿದ ಮಹಿಳೆ ಅದೇ ಕಾರಿನ ಮೇಲೆ ಬಿದ್ದು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಲೀಲಾವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಾರು ಚಾಲಕ ಥಾಮಸ್ ಅಂಥೋಣಿ ಡಿ’ಸೋಜಾ ಅವರ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಂ. ಮಾನೆ, ಎಸ್‌ಐ ಅಬ್ದುಲ್ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಚಾಲಕ ಥಾಮಸ್ ಅಂಥೋಣಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಲೀಲಾವತಿ ಸಾಲ್ಯಾನ್ ಅವರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.