ಮೂಡಿಗೆರೆ: ಮಾರುತಿ 800 ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಕಾರು ಚಾಲನೆ ಮಾಡುತ್ತಿದ್ದ ಕೀರ್ತಿ ಎಂಬ ಯುವಕನ ಸ್ಥಿತಿ ಗಂಭೀರಗೊಂಡ ಘಟನೆ ಸಮೀಪದ ಮುತ್ತಿಗೆಪುರ ಎಂಬಲ್ಲಿ ಡಿ.21ರ ಗುರುವಾರ ಮಧ್ಯಾಹ್ನ ನಡೆದಿತ್ತು.
ಬೇಲೂಕು ತಾಲೂಕಿನ ಚೀಕನಹಳ್ಳಿ ಗ್ರಾಮದ ದಿ. ಹಾಲಪ್ಪ ಎಂಬವರ ಪುತ್ರ ಕೀರ್ತಿ(21ವ) ಮೃತ ಯುವಕ. ಈತ ಮೂಡಿಗೆರೆ ಸಮೀಪದ ಚಿಕ್ಕಳ್ಳ ಎಂಬಲ್ಲಿ ಕಾಫಿ ಎಸ್ಟೇಟ್ ಒಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗಾಯಗೊಂಡ ಚಾಲಕನಿಗೆ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಅಂಬುಲೆನ್ಸ್ ಮೂಲಕ ಕರೆದೊಯ್ಯುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ನಂತರ ಮೃತದೇಹವನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ತಂದು ಶುಕ್ರವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಗುರುವಾರ ಮಧ್ಯಾಹ್ನ ಚೀಕನಹಳ್ಳಿ ತನ್ನ ಮನೆಯಿಂದ ಚಿಕ್ಕಳ್ಳದ ತೋಟಕ್ಕೆ ಮಾರುತಿ 800 ಕಾರಿನಲ್ಲಿ ತೆರಳುತ್ತಿದ್ದಾಗ ಮೂಡಿಗೆರೆ ಸಮೀಪದ ಮುತ್ತಿಗೆಪುರದಲ್ಲಿ ಎದುರಿನಿಂದ ಬಂದ ಟ್ರ್ಯಾಕ್ಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು. ಟ್ರ್ಯಾಕ್ಟರ್ ಚಿಕ್ಕಮಗಳೂರು ತಾಲೂಕು ಹಾಂದಿ ಮೂಲದ ವ್ಯಕ್ತಿಗೆ ಸೇರಿದೆಂದು ತಿಳಿದು ಬಂದಿದೆ.
ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ಕೀರ್ತಿಯವರ ತಂದೆ ತಾಯಿ ಇಬ್ಬರು ಮರಣ ಹೊಂದಿದ್ದು, ಓರ್ವ ಸಹೋದರ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.