ಕುಳಗೇರಿ ಕ್ರಾಸ್: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಚಾಲಕ ಸೇರಿ ಇಬ್ಬರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುವ ಘಟನೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ.
ಖಾನಾಪೂರ ಎಸ್‌ಕೆ ಗ್ರಾಮದ ಕನಿವೆಯಲ್ಲಿ ಈ ಘಟಣೆ ಸಂಭವಿಸಿದ್ದು ಗಾಯಾಳುಗಳನ್ನ 108 ಆಂಬ್ಯುಲೆನ್ಸ್ ನಲ್ಲಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಸಾರಿಗೆ ಬಸ್ ಡಿಕ್ಕಿ ರಭಸಕ್ಕೆ ಕಾರಿನ ಮುಂಬಾಗ ನಜ್ಜುಗುಜ್ಜಾಗಿದೆ.
ಗುಳೆದಗುಡ್ಡ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ ಹುಬ್ಬಳ್ಳಿಗೆ ಹೊರಟಿತ್ತು, ಹುಬ್ಬಳ್ಳಿಯಿಂದ ಬಾದಾಮಿಗೆ ಬರುತ್ತಿದ್ದ ಕಾರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಎಎಸ್‌ಐ ಎಸ್ ಬಿ ಅಮಲಿಹಾಳ, ಆರ್ ಎಸ್ ಬಿರಾದಾರ, ರವಿ ಮರೆನ್ನವರ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಕ್ಕಿ ಹೊಡೆದ ವಾಹನಗಳನ್ನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನು ಮಾಡಿದರು.
ಮುನ್ಸೂಚನೆ ಫಲಕಗಳಿಲ್ಲ: ಈ 218 ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುತೇಕ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಮುನ್ಸೂಚನೆಯ ಯಾವ ಫಲಕಗಳು ಇಲ್ಲ. ಗುತ್ತಿಗೆದಾರ ಅವೈಜ್ಞಾನಿಕ ರಸ್ತೆ ನಿರ್ಮಿಸಿ ಕೈ ತೊಳೆದುಕೊಂಡಿದ್ದಾನೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.