ಬೆಂಗಳೂರು: ನಗರದ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಮೂರ್ತಿ ನಗರ ಮೇಲ್ಸೇತುವೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಆಟಗಾರ ಅಸುನೀಗಿದ್ದಾರೆ.
ನಗರದ ಬಾಬುಸಪಾಳ್ಯ ನಿವಾಸಿ ಕೆ.ಮೊನೀಶ್ (27) ಮೃತರು.
ಶನಿವಾರ ತಡರಾತ್ರಿ 2 ಗಂಟೆಗೆ ದ್ವಿಚಕ್ರ ವಾಹನದಲ್ಲಿ ಮೊನೀಶ್ ಅವರು ಸಾಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಮೃತಪಟ್ಟಿದ್ದಾರೆ. ಮೊನೀಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
“ರಾಜ್ಯದ ಖ್ಯಾತ ಫುಟ್ಬಾಲ್ ಆಟಗಾರ ಕೆ.ಮೊನೀಶ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ. ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃ ಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್(ಎಕ್ಸ್) ಮಾಡಿದ್ದಾರೆ.