ಬೆಂಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬಿಇ ಪದವೀಧರ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಮಲ್ಲೇಶ್ವರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದಿಂದ ಯಶವಂತಪುರ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಬಿಇ ಪದವೀಧರನೊಬ್ಬ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಾ.ರಾಜಕುಮಾರ್ ಪ್ರತಿಮೆಯ ಪೀಠದ ಕಲ್ಲಿಗೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿದ್ದಾನೆ. ರಾಜಾಜಿನಗರ ನಿವಾಸಿ ಯಶಸ್(27) ಮೃತ ದುರ್ದೈವಿ.
ಬಿಇ ಪದವೀಧರನಾಗಿದ್ದ ಈತ, ಉದ್ಯೋಗ ಹುಡುಕುತ್ತಿದ್ದ. ಶನಿವಾರ ತಡರಾತ್ರಿ 1.30ಕ್ಕೆ ರಾಜಾಜಿನಗರದ ರಾಜಕುಮಾರ್ ರಸ್ತೆ ಮಾರ್ಗವಾಗಿ ಯಶವಂತಪುರ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ರಸ್ತೆ ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ಮ್ಯಾನ್ಸನ್ಜ್ ಮುಂಭಾಗ ಇರುವ ಡಾ.ರಾಜಕುಮಾರ್ ಪ್ರತಿಮೆಯ ಪೀಠದ ಕಲ್ಲಿಗೆ ಡಿಕ್ಕಿ ಹೊಡೆದುಕೊಂಡಿದ್ದಾನೆ. ಆತನ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ವೇಳೆ ಯಶಸ್ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಗೊತ್ತಾಗಿದೆ.
ಜತೆಗೆ ಆತ ಮದ್ಯ ಸೇವಿಸಿದ್ದನಾ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿ ಉದ್ಯೋಗಿ ಸಾವು: ಮತ್ತೂಂದು ಪ್ರಕರಣದಲ್ಲಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಶವಂತಪುರ ನಿವಾಸಿ ವಿಜಯ್(29) ಮೃತರು. ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿರುವ ವಿಜಯ್, ಶುಕ್ರವಾರ ರಾತ್ರಿ 9.30ಕ್ಕೆ ನೈಸ್ ರಸ್ತೆ ಮಾರ್ಗವಾಗಿ ಯಶ ವಂತಪುರಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಉಲ್ಲಾಳ ಸೇತುವೆ ಬಳಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದುಕೊಂಡಿದ್ದಾನೆ. ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದು ತಲೆ, ದೇಹದ ಕೆಲ ಭಾಗಗಳಿಗೆ ಪೆಟ್ಟು ಬಿದ್ದಿತ್ತು. ಈತನೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.