Advertisement

ಅಂತ್ಯ ಸಂಸ್ಕಾರಕ್ಕೆ ತೆರಳಿ ವಾಪಸ್ಸಾಗುತ್ತಿದ್ದವರ ವಾಹನ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ

07:35 PM Nov 07, 2020 | sudhir |

ಹನೂರು: ಮೃತರೋರ್ವರ ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗುತ್ತಿದ್ದ ಈಚರ್ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ತಾಲೂಕಿನ ಹಲಗಾಪುರ – ಶಾಗ್ಯ ಮಾರ್ಗ ಮಧ್ಯದಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ ಶಾಗ್ಯ ಗ್ರಾಮದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದನು. ಈತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತಾಲೂಕಿನ ಹುತ್ತೂರು ಗ್ರಾಮದಿಂದ 50ಕ್ಕೂ ಹೆಚ್ಚು ಜನ ಈಚರ್ ವಾಹನವೊಂದನ್ನು ಬಾಡಿಗೆಗೆ ಪಡೆದು ಶಾಗ್ಯ ಗ್ರಾಮಕ್ಕೆ ಆಗಮಿಸಿ ಸಂಬಂಧಿಕನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಅಂತ್ಯಸಂಸ್ಕಾರದ ಬಳಿಕ ಸ್ವಗ್ರಾಮಕ್ಕೆ ಹಿಂದಿರುಗಿತ್ತಿದ್ದ ವೇಳೆ ವಾಹನದ ಇಂಜಿನಿನಿಂದ ಬೃಹತ್ ಶಬ್ದ ಬಂದಿದೆ. ಇದರ ಪರಿಣಾಮ ವಾಹನ ಆಯತಪ್ಪಿ ರಸ್ತೆಯ ಮಧ್ಯದಲ್ಲಿಯೇ ಉರುಳಿದೆ. ಇದರ ಪರಿಣಾಮ ವಾಹನದಲ್ಲಿದ್ದ 3 ಜನರಿಗೆ ಕೈ ಮುರಿತವಾಗಿದ್ದು, ಓರ್ವ ವ್ಯಕ್ತಿಗೆ ಕಾಲು ಮುರಿದಿದ್ದು 30ಕ್ಕೂ ಹೆಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಹನೂರಿನಲ್ಲಿ ಪ್ರಥಮ ಚಿಕಿತ್ಸೆ: ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಕೂಡಲೇ ಜಿ.ಪಂ ಸದಸ್ಯೆ ಲೇಖಾ ರವಿಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಜಿ.ಪಂ ಸದಸ್ಯೆ ಲೇಖಾ ರವಿಕುಮಾರ್ ತಾಲೂಕು ವೈದ್ಯಾಧಿಕಾರಿ ಗೋಪಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಡಿಎಚ್‍ಓ ವಿವಿಧೆಡೆಗಳಿಂದ ಆಂಬುಲೆನ್ಸ್‍ಗಳನ್ನು ಸ್ಥಳಕ್ಕೆ ರವಾನಿಸಿ ಗಾಯಾಳುಗಳನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಬಳಿಕ ಗಾಯಾಳುಗಳಿಗೆ ಡಾ||ಪ್ರಕಾಶ್ ಮತ್ತು ಡಾ||ಪುಷ್ಪರಾಣಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಹೆಚ್ಚಿನ ಗಾಯಗಳಾಗಿದ್ದ 3 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೆ ಕೊಳ್ಳೇಗಾಲದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ.

ಶಾಸಕರು ಮತ್ತು ಮುಖಂಡರ ಭೇಟಿ ಸಾಂತ್ವನ: ಘಟನೆಯ ಬಗ್ಗೆ ಮಾಹಿತಿ ಪಡೆದ ಶಾಸಕ ಆರ್.ನರೇಂದ್ರ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು. ಬಿಜೆಪಿ ಮುಖಂಡರಾದ ಡಾ||ಪ್ರೀತನ್ ನಾಗಪ್ಪ, ದತ್ತೇಶ್‍ಕುಮಾರ್ , ಜೆಡಿಎಸ್ ಮುಖಂಡರಾದ ಮಂಜುನಾಥ್ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next