Advertisement
ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಮಂದಿ ಈಗ ವಾಹನಾಪಘಾತದಲ್ಲಿ ಮೃತಪಡುತ್ತಿದ್ದಾರೆ. ಪ್ರತೀಕ್ಷಣ ಎಂಬಂತೆ ಜಗತ್ತಿನಲ್ಲಿ ವಾಹನಾಪ ಘಾತಗಳು ಸಂಭವಿಸುತ್ತಲೇ ಇರುತ್ತವೆ. ಅನೇಕರು ಅಸುನೀಗಿದರೆ ಅದರ ಮೂರ್‍ನಾಲ್ಕು ಪಟ್ಟು ಮಂದಿ ಗಾಯಾಳುಗಳಾಗುತ್ತಾರೆ. ಕೆಲವರು ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ಈಡಾಗುತ್ತಾರೆ. ವಾಹನಾಪಘಾತಗಳನ್ನು ತಡೆಗಟ್ಟುವ ಬಗ್ಗೆ ವಾಹನ ಗಳ ಆವಿಷ್ಕಾರದ ದಿನಗಳಿಂದಲೇ ಎಚ್ಚರಿಕೆಯ ಕರೆಗಂಟೆ ಬಾರಿಸಲಾಗುತ್ತಿದೆ. ಆದರೆ ಇದು ಕೇವಲ ಸದ್ದಿನಲ್ಲಿ ಮಾತ್ರ ಉಳಿದುಕೊಂಡಿದೆ. ಅನುಷ್ಠಾನಕ್ಕೆ ಬರುವಂತಹ ಸಾಧ್ಯತೆಗಳು ಕ್ಷೀಣಿಸುತ್ತಲೇ ಇರುತ್ತದೆ. ದಿನದಿನ ಬಗೆಬಗೆಯ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೆ ಅಪಘಾತಗಳ ಸಂಖ್ಯೆ ಕ್ಷಣಕ್ಷಣಕ್ಕೆ ಏರುತ್ತಲೇ ಇದೆ.
Related Articles
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧಾರಣೆಯ ನಿಯಮ ಉಲ್ಲಂ ಸಿ ಮೃತ್ಯುವಿಗೆ ಈಡಾದ ಅಥವಾ ತಲೆಗೆ ಗಂಭೀರ ಏಟುಗಳಾದ ಪ್ರಕರಣಗಳಿವೆ. ಹಿಂಬದಿ ಸವಾರರು ಹೆಲ್ಮೆಟ್ ಬಳಸದೇ ಇದ್ದರೆ, ಹೆಲ್ಮೆಟನ್ನು ಅಲಂಕಾರಿಕವಾಗಿ ಕೈಗೆ ತೊಟ್ಟುಕೊಳ್ಳುವ ದಾಷ್ಟéì ಭೀಕರ ಅಪಘಾತಗಳ ಮೂಲವೂ ಹೌದು.
Advertisement
ಇತ್ತೀಚೆಗೆ ಬೇರೆ ಬೇರೆ ಕಡೆ ಸರಕಾರಿ ಅಥವಾ ಖಾಸಗಿ ಬಸ್‌ಗಳವರಿಗೆ, ಘನ ವಾಹನಗಳವರಿಗೆ, ಟ್ರಕ್ ಇತ್ಯಾದಿಗಳವರಿಗೆ ಪೊಲೀಸರು ಮತ್ತು ಸಾರಿಗೆ ಇಲಾಖೆಯವರು ಎಚ್ಚರಿಕೆ ನೀಡುತ್ತಲೇ ಬಂದಿರುತ್ತಾರೆ. ಖಾಸಗಿ ಬಸ್‌ಗಳಿಗೆ ಸಂಬಂಧಿಸಿ ಬಸ್ ಸ್ಟಾಪ್ ಅಲ್ಲದ ಕಡೆ ಅಲ್ಲಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದು, ಪ್ರಯಾಣಿಕರು ಬಸ್ ಏರುವ ಮೊದಲೇ ಬಸ್ ಚಾಲನೆ ಅಂತೆಯೇ ಫುಟ್‌ಬೋರ್ಡ್ ಅಥವಾ ಬಸ್‌ನ ಛಾವಣಿ ಏರು ವವರು ದುರಂತಕ್ಕೀಡಾದ ಪ್ರಕರಣಗಳು ಹೆಚ್ಚು. ಬ್ರೇಕ್‌ಫೇಲ್ ಮುಂತಾದ ತಾಂತ್ರಿಕ ಕಾರಣ ಗಳಿಂದ ಅಪಘಾತಗಳು ಸಂಭವಿಸುವ ಪ್ರಮಾಣ ಕಡಿಮೆ.
ಭಾರತದ ಮಹಾನಗರಗಳ ಪೈಕಿ ದಿಲ್ಲಿಯಲ್ಲಿ ಅತೀ ಹೆಚ್ಚು ಅಪಘಾತ ಈ ಹಿಂದೆ ನಡೆದಿದ್ದರೆ ಹೆದ್ದಾರಿಗಳಲ್ಲೇ ಮಾರಣಾಂತಿಕ ಅಪಘಾತಗಳ ಸಂಖ್ಯೆ ಹೆಚ್ಚು. ರಾತ್ರಿಯ ವೇಳೆ ಹೆಡ್‌ಲೈಟ್ ದುರ್ಬಳಕೆಯು ಎದುರಿನ ವಾಹನಕ್ಕೆ ತೊಂದರೆ ಉಂಟು ಮಾಡಬಹುದು. ಕೆಲವು ಕಡೆ ಇಲಾಖೆಯವರು ಹಾಕಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳು ಅಥವಾ ವೇಗ ತಡೆಗಳೇ ಅಪಘಾತಕ್ಕೆ ಕಾರಣವಾಗುತ್ತದೆ. ಒಂದು ಉದಾಹರಣೆ: ಅಪಘಾತ ಕಡಿಮೆ ಮಾಡಲೆಂದು ಪಡುಬಿದ್ರಿ- ಕಾರ್ಕಳ ರಸ್ತೆಯಲ್ಲಿ ಅಲ್ಲಲ್ಲಿ ಅಧಿಕ ಸಂಖ್ಯೆಯಲ್ಲಿ ನಿರ್ಮಿಸಲಾದ ರಸ್ತೆ ಉಬ್ಬುಗಳೇ ಅಪಘಾತಕ್ಕೆ ಕಾರಣವಾದ ನಿದರ್ಶನವಿದೆ. ಏಕೆಂದರೆ ರಸ್ತೆ ಉಬ್ಬು ಅಥವಾ ಹಂಪ್‌ಗ್ಳನ್ನು ರಚನೆ ಮಾಡಿದಾಗ ಎಚ್ಚರಿಕೆಯ ಸ್ವರೂಪದಲ್ಲಿ ಅದಕ್ಕೆ ನಿರ್ದಿಷ್ಟವಾದ ಬಣ್ಣ ಬಳಿದಿರಬೇಕು, ಸೂಚನಾ ಫಲಕಗಳಿರಬೇಕು. ಆದರೆ ಈ ಬಗ್ಗೆ ಇಲಾಖೆಗಳು ನಿರ್ಲಕ್ಷ್ಯವನ್ನೇ ತೋರುತ್ತಿವೆ. ಅಪಘಾತ ತಡೆಗಟ್ಟುವ ಕುರಿತು ವಾಹನ ಚಾಲಕರ ಕಾಳಜಿಯೂ ಅತೀ ಮುಖ್ಯ. ಒಂದೊಮ್ಮೆ ಅಪಘಾತವಾದಾಗ ಯಾರದ್ದೇ ತಪ್ಪಿರಲಿ ದೊಡ್ಡ ವಾಹನಗಳನ್ನು ಬೆಟ್ಟು ಮಾಡಿ ತೋರಿಸಲಾಗುತ್ತಿತ್ತು. ಈಗ ತಂತ್ರಜ್ಞಾನ ಬೆಳೆದಂತೆ ತಪ್ಪು ಮಾಡಿದವರನ್ನು ಸುಲಭವಾಗಿ ಗುರುತಿಸಬಹುದು. ಆದರೆ ವಾಹನ ಅಪಘಾತಗಳನ್ನು ಉಂಟು ಮಾಡುವವರನ್ನು ಶಿಕ್ಷಿಸುವ ಕುರಿತಾದ ಕಾನೂನು ದೇಶದಲ್ಲಿ ಅತ್ಯಂತ ದುರ್ಬಲವಾಗಿದೆ. ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಸಣ್ಣಪುಟ್ಟ ಶಿಕ್ಷೆಗಳನ್ನು ವಿಧಿಸಿರಬಹುದು. ಇಲ್ಲಿ ಕಠಿನ ಅಥವಾ ಕಟ್ಟುನಿಟ್ಟಿನ ಕಾನೂನು ಕ್ರಮಗಳು ಒಂದಿಷ್ಟು ಜಾಗೃತಿಯನ್ನು ಮೂಡಿಸ ಬಹುದು. ಅನೇಕ ಮಹಾನಗರಗಳಲ್ಲಿ ಒಂದು ವಾಹನ ವಿಶೇಷವಾಗಿ ದ್ವಿಚಕ್ರ ವಾಹನಗಳನ್ನು ಯುವಕರು ಖರೀದಿಸುವಾಗ ಅದರ ದಾಖಲೆ ಪತ್ರಗಳನ್ನು ಗಮನಿಸಿರುವುದಿಲ್ಲ ಅಥವಾ ಅವರೇ ಸ್ವತಃ ಚಾಲನೆಯ ಪರವಾನಿಗೆ ಹೊಂದಿರುವುದಿಲ್ಲ. ಇವೆಲ್ಲವೂ ನಿಯಂತ್ರಣವಾದಾಗ ಅಪಘಾತಗಳು ಇಳಿಮುಖವಾಗಬಹುದು.
ಹಾಗೆ ನೋಡಿದರೆ ರೈಲು, ವಿಮಾನ ಹಡಗು ಇತ್ಯಾದಿಗಳಲ್ಲೂ ಅಪಘಾತ ಸಂಭವಿಸುತ್ತವೆ. ಆದರೆ ಅದು ರಸ್ತೆ ಅಪಘಾತದ ಸ್ವರೂಪದಲ್ಲಿ ಅಲ್ಲ ಎಂಬುದು ಗಮನಿಸಬೇಕಾದ ಅಂಶ.
ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆ, ಚಾಲಕರ ಸಂಖ್ಯೆ ಹೆಚ್ಚುತ್ತಿರುವಂತೆ ಅಪಘಾತಗಳನ್ನು ನಿಯಂತ್ರಿಸುವ ಕುರಿತಾದ ಕಠಿನ ಕ್ರಮಕ್ಕೆ ಇದು ಸಕಾಲ.
ಅಂದಹಾಗೆ: ಈ ಹಿಂದೆಲ್ಲ ವಾಹನ ಅಪಘಾತ ಉಂಟಾಗುತ್ತಿದೆ ಎನ್ನಲಾಗುತ್ತಿತ್ತು. ಈಗ ವಾಹನಾಪಘಾತಗಳನ್ನು ಉಂಟು ಮಾಡಲಾಗುತ್ತಿದೆ ಎನ್ನಬಹುದೋ ಏನೋ.
-ಮನೋಹರ ಪ್ರಸಾದ್