Advertisement

Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್‌ ಲಾರಿ ಢಿಕ್ಕಿ; ನಾಲ್ವರು ಗಂಭೀರ

01:33 AM Nov 21, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ಕುಂಭಾಶಿ ರಾ.ಹೆ. 66ರಲ್ಲಿ ಇನ್ನೋವಾ ಕಾರಿಗೆ ಹಿಂದಿನಿಂದ ಅತೀ ವೇಗದಿಂದ ಬಂದ ಇನ್ಸುಲೇಟರ್‌ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನ. 20ರಂದು ಅಪರಾಹ್ನ ಸಂಭವಿಸಿದೆ.

Advertisement

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ಕೇರಳ ಕಡೆಗೆ ಏಳು ಮಂದಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಮಹಾದ್ವಾರದ ಬಳಿ 50 ಮೀ. ಮುಂದಕ್ಕೆ ಸಾಗಿತ್ತು. ದೇವಸ್ಥಾನವನ್ನು ಕಂಡ ಕಾರಿನಲ್ಲಿದ್ದವರು ಈ ದೇವಸ್ಥಾನಕ್ಕೆ ಹೋಗಲೆಂದು ಚಾಲಕನಿಗೆ ಸೂಚಿಸಿದಂತೆ ಕಾರನ್ನು ಹಿಂದಕ್ಕೆ ಚಲಾಯಿಸಿಕೊಂಡು ಬರುತ್ತಿದ್ದರು.

ದೇಗುಲ ಪ್ರವೇಶ ದ್ವಾರ ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಇನ್ಸುಲೇಟರ್‌ ಮೀನಿನ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಇನ್ನೋವಾ ಕಾರನ್ನು ಸುಮಾರು 50 ಮೀಟರ್‌ವರೆಗೂ ಎಳೆದೊಯ್ದಿದ್ದು, ದೇಗುಲದವರು ಅಳವಡಿಸಿದ ಹೋಲ್ಡಿಂಗ್‌ನ ನಡುವೆ ಹಾದು ಹೋಗಿ ಗಿಡಗಂಟಿಗಳ ಪೊದೆಯೊಳಗೆ ನುಸುಳಿ ಹೋಗಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಇನ್ಸುಲೇಟರ್‌ ಮೀನಿನ ಲಾರಿಯ ಟಯರ್‌ ಸಿಡಿದು ವಾಹನ ಪಲ್ಟಿಯಾಗಿದೆ.

ಕಾರಿನಲ್ಲಿ ಏಳು ಮಂದಿ ಇದ್ದರು
ಇನ್ನೋವಾ ಕಾರಿನಲ್ಲಿದ್ದ ಕೇರಳ ಪಯ್ಯನೂರು ಮೂಲದ ನಾರಾಯಣನ್‌, ವತ್ಸಲಾ, ಅನಿತಾ, ಚೈತ್ರಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಮಧುಸೂದನ್‌, ಭಾರ್ಗವನ್‌, ಚಾಲಕ ಫೈಝಲ್‌ ಹಾಗೂ ಇನ್ಸುಲೇಟರ್‌ ಚಾಲಕ ಹೊನ್ನಾವರದ ಮಹೇಶ್‌ ಅವರೂ ಗಾಯಗೊಂಡಿದ್ದು, ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆರೆಯಾಯಿತು ಅಪಘಾತದ ಭೀಕರತೆ

ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಳವಡಿಸಿದ್ದ ಸಿಸಿ ಕೆಮರಾದಲ್ಲಿ ಅಪಘಾತದ ಸಂಪೂರ್ಣ ದೃಶ್ಯಾವಳಿಗಳು ಸೆರೆಯಾಗಿದ್ದು, ಅಪಘಾತದ ತೀವ್ರತೆಯನ್ನು ಸಾರಿ ಹೇಳುತ್ತಿದೆ. ಅಪಘಾತದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆ ಸಂಭವಿಸುತ್ತಿದ್ದಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಪ್ರಸಾದ್‌ ಮತ್ತು ಸುದರ್ಶನ್‌ ಹಾಗೂ ಸಿಬಂದಿ ಧಾವಿಸಿ ಪರಿಶೀಲಿಸಿದ್ದಾರೆ.

Advertisement


ಜನರ ಕ್ಷಿಪ್ರ ಸ್ಪಂದನೆ
ಅಪಘಾತ ಸಂಭವಿಸುತ್ತಿದ್ದಂತೆ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಸಿಬಂದಿ ಕೀರ್ತನ್‌ ಶೇರೆಗಾರ್‌, ಸ್ಥಳೀಯ ಗ್ಯಾರೇಜ್‌ನ ವೆಂಕಟೇಶ್‌, ಗಿರೀಶ್‌ ಹಾಗೂ ಇನ್ನಿತರ ಸ್ಥಳೀಯರು ತತ್‌ಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಕಾರಿನ ಹಿಂಬದಿಯ ಸೀಟ್‌ನಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ನಜ್ಜುಗುಜ್ಜಾದ ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದವರನ್ನು ಹೊರ ತೆಗೆಯಲು ಹರಸಾಹಸಪಟ್ಟರು.

ಗಾಯಾಳುಗಳನ್ನು ತತ್‌ಕ್ಷಣವೇ ಆ್ಯಂಬುಲೆನ್ಸ್‌ ಹಾಗೂ ಆಟೋ ರಿಕ್ಷಾದ ಸಹಾಯದಿಂದ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತ ಸಂಭವಿಸುತ್ತಿದ್ದಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯ ಸಿಬಂದಿ ಹಾಗೂ ಸಾಸ್ತಾನ ಟೋಲ್‌ ಮ್ಯಾನೇಜರ್‌ ಸುನಿಲ್‌ ಹಾಗೂ ಸಿಬಂದಿ ರಾ.ಹೆ. 66ರಲ್ಲಿ ಸೇಫ್ಟಿ ಕೋನ್‌ ಹಾಗೂ ಬ್ಯಾರಿಕೇಡ್‌ಗಳನ್ನು ಇರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next