ಚಿಕ್ಕಮಗಳೂರು: ಹಾಂದಿ ಗ್ರಾಮದಿಂದ ವಾಟೇಗನಹಳ್ಳಿ ಮೂಲಕ ಹಾದುಹೋಗುವ ಬಸ್ಕಲ್ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನಗಳ ಸಂಚಾರ ದುಸ್ತರವಾಗಿದೆ.
ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಂದಿ-ವಾಟೇಗನಹಳ್ಳಿ, ಮೂಲಕ ಹಾದು ಹೋಗುವ ಬಸ್ಕಲ್ ವರೆಗೆ ಸುಮಾರು 9 ಕಿ.ಮೀ. ಕ್ರಮಿಸುವ ರಸ್ತೆಯಲ್ಲಿ 5 ಕಿ.ಮೀ. ಯಷ್ಟು ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳೇ ನಿರ್ಮಾಣವಾಗಿ ಸಂಪೂರ್ಣ ಹದಗೆಟ್ಟಿದೆ. ವಾಹನಗಳು ಅಲ್ಲಲ್ಲಿ ಮಗುಚಿ ಬೀಳತೊಡಗಿದ್ದು, ಮಳೆ ಸುರಿದಾಗ ಇದೇನು ರಸ್ತೆಯೋ ಅಥವಾ ಹಳ್ಳವೋ ಎಂಬ ಅನುಮಾನ ಮೂಡುತ್ತದೆ.
ಹತ್ತಾರು ವರ್ಷಗಳಿಂದ ಈ ರಸ್ತೆಯ ದುರಸ್ತಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವ 20ಕ್ಕೂ ಹೆಚ್ಚು ಗ್ರಾಮಗಳ ಏಳು ಸಾವಿರಕ್ಕೂ ಹೆಚ್ಚು ಜನರು ಈ ಹೊಂಡದ ಹಳ್ಳವಾಗಿರುವ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಅಗತ್ಯ ಕೆಲಸಕ್ಕಾಗಿ ತೆರಳುವ ಗ್ರಾಮಸ್ಥರು, ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳು ನಿತ್ಯ ನರಕ ಅನುಭವಿಸುವಂತಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಶೃಂಗೇರಿ ಮತ್ತು ಬೇಲೂರಿಗೆ ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ.
ರಸ್ತೆ ಹದಗೆಟ್ಟಿದ್ದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಕೂಡ ಸ್ಥಗಿತಗೊಳಿಸಲಾಗಿದೆ. ಕಳೆದ 1989ರಿಂದ ಆರಂಭವಾಗಿದ್ದ ಚಿಕ್ಕಮಗಳೂರು-ಗೆಂಡೇಹಳ್ಳಿ ಬಸ್ ಸಂಚಾರ ಈ ಎರಡು ವರ್ಷಗಳಿಂದ ಇಲ್ಲದೆ, ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಅನಾನುಕೂಲ ಉಂಟಾಗಿದೆ. ಪ್ರಯಾಣಿಕರು ದುಪ್ಪಟ್ಟು ಹಣಕೊಟ್ಟು ಆಟೋಗಳು, ಖಾಸಗಿ ಬಾಡಿಗೆ ವಾಹನಗಳಲ್ಲಿ ಸಂಚರಿಸಬೇಕಿದ್ದು, ಆ ವಾಹನ ಚಾಲಕರು ಇಂತಹ ಹೊಂಡದ ಚಲಿಸಲು ಹಿಂದೇಟು ಹಾಕುತ್ತಾರೆ. ಇನ್ನು ರೋಗಿಗಳ, ಗರ್ಭಿಣಿಯರ ಪಾಡು ಹೇಳತೀರದಂತಾಗಿದೆ.
ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ಮುಖಂಡರು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದಾಗ ಸೂಕ್ತ ಕ್ರಮಕ್ಕಾಗಿ ಸರ್ಕಾರದಿಂದ ಲೋಕೋಪಯೋಗಿ ಇಲಾಖೆಗೆ ಸೂಚನೆ ಬಂದಿತ್ತು. ಆದರೆ ಇಲಾಖೆ ಅಧಿಕಾರಿಗಳು ಇದುವರೆಗೂ ರಸ್ತೆ ನಿರ್ವಹಣೆ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತ ಬಂದಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಇಂದ್ರವಳ್ಳಿ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆಗ ಸಿಎಂ ಸುಮಾರು 12 ಕೋಟಿ ಅಂದಾಜು ವೆಚ್ಚದಲ್ಲಿ ಹಾಂದಿ-ಬಸ್ಕಲ್ ರಸ್ತೆ ಅಭಿವೃದ್ಧಿಗೊಳಿಸಲು ಸೂಚಿಸಿದ್ದರು. ಆದರೆ ನಂತರ ಬಂದ ಸರ್ಕಾರ ಮತ್ತು ಇಲಾಖೆಯ ನಿರ್ಲಕ್ಷ್ಯತನದ ಪರಿಣಾಮ ಈ ರಸ್ತೆಯ ಅಭಿವೃದ್ಧಿ ನನಗುದಿಗೆ ಬಿದ್ದಿದೆ ಎನ್ನಲಾಗಿದೆ.
ಇದನ್ನೂ ಓದಿ:ಹಾಲಮಡ್ಡಿಯಲ್ಲಿ ಒಡೆದ ನೀರಿನ ಪೈಪ್ :ಕಾಗದ ಕಾರ್ಖಾನೆಯ ಭದ್ರತಾ ವಿಭಾಗದಿಂದ ಸಮಯೋಚಿತ ಸ್ಪಂದನೆ
“ಹಾಂದಿ-ಬಸ್ಕಲ್ ರಸ್ತೆ ದುರಸ್ತಿಗಾಗಿ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಮೀಸಲಿದ್ದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳೂ ಸುಮ್ಮನಾಗಿದ್ದಾರೆ. ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು”
–ಅಬ್ದುಲ್ ರೆಹಮಾನ್ ಇಂದ್ರವಳ್ಳಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ.