ವಾಡಿ: ನೀವು ನಡೆದಾಡುತ್ತಿರುವ ರಸ್ತೆ ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್ ಸರ್ಕಾರ. ನಿಮ್ಮ ಮಕ್ಕಳು ಓದಲು ಹೋಗುತ್ತಿರುವ ವಸತಿ ಶಾಲೆ ನಿರ್ಮಿಸಿದ್ದು ಕಾಂಗ್ರೆಸ್. ನೀವು ಅನಾರೋಗ್ಯಕ್ಕೀಡಾದರೆ ಚಿಕಿತ್ಸೆ ಪಡೆದುಕೊಳ್ಳಲು ಹೋಗುವ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಕಟ್ಟಿಸಿದ್ದೂ ನಾವೇ. ಆದರೂ ನಮ್ಮನ್ನು ಟೀಕಿಸುತ್ತೀರಲ್ಲ. ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಚಿತ್ತಾಪುರ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 8 ಕೋಟಿ ರೂ. ಅನುದಾನ ದಡಿ ರಾವೂರ ಗ್ರಾಮದಲ್ಲಿ ಕೈಗೊಳ್ಳಲಾದ ಮೌಲಾನಾ ಆಜಾದ್ ಶಾಲೆಗೆ ಹೆಚ್ಚುವರಿ ಕೋಣೆ ಹಾಗೂ ವಸತಿ ಗೃಹಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ 3.40 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಈಗಲೇ ಎರಡು ಸಿಎಂ ಕೊಟ್ಟಿರುವ ಬಿಜೆಪಿಗರು ಮತ್ತೂಮ್ಮೆ ಸಿಎಂ ಬದಲಿ ಸಲು ಚಿಂತಿಸುತ್ತಿದ್ದಾರೆ. ಕೇವಲ ಸಿಎಂ ಬದಲಾವಣೆ ಮಾಡುವುದೇ ಇವರ ಕೆಲಸವಾಗಿದೆ ಎಂದರು.
ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಇಒ ನೀಲಗಂಗಾ ಬಬಲಾದ, ಗ್ರಾಪಂ ಅಧ್ಯಕ್ಷೆ ದೇವಕಿ ನಾರಾಯಣ ಮಿನಿಗಿಲೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಶ್ರೀನಿವಾಸ ಸಗರ, ಅಬ್ದುಲ್ ಅಜೀಜ್ ಸೇಠ ಮತ್ತಿತರರು ಪಾಲ್ಗೊಂಡಿದ್ದರು.
ಕಮರವಾಡಿ ಗ್ರಾಮಕ್ಕೆ ನೀರು
ಸಮುದಾಯ ಭವನಗಳ ಉದ್ಘಾಟನೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕಮರವಾಡಿ ಗ್ರಾಮಕ್ಕೆ ಮಂಜೂರಾದ ಒಟ್ಟು 55 ಲಕ್ಷ ರೂ. ವೆಚ್ಚದ ನಳ ಸಂಪರ್ಕ ಕಾಮಗಾರಿಗೆ ಶಾಸಕ ಪ್ರಿಯಾಂಕ್ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಸರೋಜಿನಿ ದೇಶಮುಖ, ಪಿಡಿಒ ಭಾರತಿ ಮಣ್ಣುರೆ, ಸೈಯ್ಯದ್ ಎಂ. ಸಾಹೇಬ್ ಇದ್ದರು.