Advertisement

ಹೊಂಡ-ಗುಂಡಿ: ನಗರದಲ್ಲಿ ಸಂಚಾರ ಅಧ್ವಾನ

12:02 PM Sep 13, 2022 | Team Udayavani |

ಮಹಾನಗರ: ನಗರದ ಡಾಮರು ರಸ್ತೆಯಲ್ಲಿ ಹೊಂಡ-ಗುಂಡಿ ಅಧ್ವಾನ ಮತ್ತೆ ಸಂಚಾರ ಸಂಕಷ್ಟ ಸೃಷ್ಟಿಸಿದ್ದು, ಆಟೋ, ಕಾರು ಸಹಿತ ದ್ವಿಚಕ್ರ ವಾಹನಗಳ ಸಂಚಾರ ದುಸ್ತರವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ನಗರದ ಆಯ್ದ ರಸ್ತೆಗಳ ಹೊಂಡ ಗುಂಡಿಗಳಿಗೆ ಕೆಲವೆಡೆ ತರಾತುರಿಯಲ್ಲಿ ತೇಪೆ ನಡೆಸಲಾಗಿತ್ತು. ಆದರೆ ಆ ರಸ್ತೆಯಲ್ಲಿ ಇದೀಗ ಮತ್ತೆ ಗುಂಡಿ ಕಾಣಿಸಿಕೊಂಡಿದೆ. ನಗರದಲ್ಲಿ ಮತ್ತೂಮ್ಮೆ ಮಳೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ತೇಪೆಯೂ ಮಳೆ ನೀರಲ್ಲಿ ಹೋಗಿದೆ. ಇದು ಪ್ರಯಾಣಿಕರಿಗೆ ಸಂಚಾರ ಸಂಕಷ್ಟ ಸೃಷ್ಟಿಸಿದೆ.
ಮುಖ್ಯರಸ್ತೆಗಳು ಕಾಂಕ್ರೀಟ್‌ ರಸ್ತೆಗಳಾಗಿ ಬದಲಾಗಿದ್ದರೂ ಅದಕ್ಕೆ ಸಂಪರ್ಕವಿರುವ ಕೆಲವು ಕಡೆಯ ಡಾಮರು ರಸ್ತೆಗಳು ಗುಂಡಿಯಿಂದಾಗಿ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲಿಯೂ ನಗರದ ಒಳರಸ್ತೆಗಳಂತೂ ಸಂಚಾರಕ್ಕೆ ಅಯೋಗ್ಯವಾಗಿದೆ.

ಅರೆಬರೆ ಕಾಮಗಾರಿ

ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗಳನ್ನು ಒಳಚರಂಡಿ ಜಾಲ ದುರಸ್ತಿ, ನೀರಿನ ಪೈಪ್‌ಲೈನ್‌ ದುರಸ್ತಿ ಎಂದು ಅಗೆದು, ಅದನ್ನು ಯಥಾಸ್ಥಿತಿಗೆ ತರದೆ ಗುಂಡಿಗಳು ಹಾಗೇ ಉಳಿದಿವೆ. ಜತೆಗೆ ಅಬ್ಬರದ ಮಳೆಯಿಂದಲೂ ರಸ್ತೆಗಳು ಹಾಳಾಗಿವೆ. ಕೆಲವು ಕಡೆಗಳಲ್ಲಿ ತೇಪೆ ಮಾಡಿದರೂ ಮತ್ತೆ ಎದ್ದು ಹೋಗಿವೆ.
ನಗರದ ಮುಖ್ಯಭಾಗದಲ್ಲಿರುವ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ಕೆಲವೆಡೆ ನಡೆದಿದ್ದರೂ ಒಳರಸ್ತೆಗಳ ಹೊಂಡಗಳಿಗೆ ತೇಪೆ ಭಾಗ್ಯ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ವಾರ್ಡ್‌ನ ಒಳ ರಸ್ತೆಗಳ ಕೆಲವು ಭಾಗದ ಡಾಮರು ಕಿತ್ತುಹೋಗಿದ್ದು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕೂಡ ತುರ್ತಾಗಿ ದುರಸ್ತಿ ಮಾಡುವ ನಿಟ್ಟಿನಲ್ಲಿ ಪಾಲಿಕೆ ಕ್ರಮ ಕೈಗೊಳ್ಳಬೇಕಿದೆ.

ಕೊಡಿಯಾಲಬೈಲ್‌ ಪರಿಸರದ ವಿವಿಧ ರಸ್ತೆಗಳು, ಕುದ್ರೋಳಿ, ಅಳಕೆ, ಕದ್ರಿ ಕಂಬಳ, ಮಣ್ಣಗುಡ್ಡೆ, ಜಪ್ಪು, ಶಕ್ತಿನಗರ ಸಹಿತ ಒಳರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವುದೇ ಕಷ್ಟವಾಗಿದೆ. ಒಳರಸ್ತೆಗಳನ್ನು ಪ್ರತಿ ವರ್ಷ ತೇಪೆ ಮಾಡಲಾಗುತ್ತದೆ. ಆದರೆ ಮಳೆಗಾಲದಲ್ಲಿ ಸುರಿಯುವ ಭಾರಿ ಮಳೆಗೆ ರಸ್ತೆ ಮತ್ತೆ ಗುಂಡಿ ಬೀಳುತ್ತದೆ. ಹಾಗಾಗಿ ತೇಪೆ ಕೆಲಸ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದೆ.

Advertisement

ಗೈಲ್‌, ಜಲಸಿರಿ ಕಾಮಗಾರಿಯೇ ಸಮಸ್ಯೆ!

ನಗರದ ಹಲವು ಕಡೆಗಳಲ್ಲಿ ಗೈಲ್‌ ಗ್ಯಾಸ್‌ಲೈನ್‌, ಜಲಸಿರಿ, ಪಾಲಿಕೆ, ಸ್ಮಾರ್ಟ್‌ ಸಿಟಿಯಿಂದ ವಿವಿಧ ಕಾಮಗಾರಿ ನಡೆಯುತ್ತಿದೆ. ಈ ಉದ್ದೇಶಕ್ಕೆ ಅನೇಕ ಕಡೆಗಳಲ್ಲಿ ರಸ್ತೆ ಅಗೆಯಲಾಗಿದೆ. ಕೆಲವೆಡೆ ಅಗೆದ ರಸ್ತೆ ಅದೇ ಸ್ಥಿತಿಯಲ್ಲಿದ್ದು, ಇನ್ನೂ ಕೆಲವು ಪ್ರದೇಶದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ. ಅಗೆದ ಕಾಂಕ್ರೀಟ್‌ ರಸ್ತೆಯಲ್ಲಿ ಎತ್ತರ ತಗ್ಗು ನಿರ್ಮಾಣಗೊಂಡಿದೆ. ಕೆಲವೆಡೆ ಅಗೆದ ಗುಂಡಿ ಸರಿಯಾಗಿ ಮುಚ್ಚದೆ ವಾಹನ ಸಂಚಾರ ದುಸ್ತರವೆನಿಸಿದೆ. ಇನ್ನೂ ಕೆಲವೆಡೆ ಜಲ್ಲಿ ಹಾಕಲಾಗಿದ್ದು ಅದನ್ನು ಎದ್ದು ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next