ಮಡಿಕೇರಿ: ಕೊನೆಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ನಗರ ಪ್ರದಕ್ಷಿಣೆ ಮಾಡಿದ್ದು, ರಸ್ತೆ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ್ದಾರೆ.
ನಗರೋತ್ಥಾನ ಹಾಗೂ ಮಳೆಹಾನಿ ಪರಿಹಾರ ಯೋಜನೆಯಡಿ 28 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರಸಭೆ ಅಧಿಕಾರಿಗಳೊಂದಿಗೆ ನಗರದ ಎಫ್ಎಂಸಿ ಕಾಲೇಜು ರಸ್ತೆ, ರೇಸ್‌ಕೋರ್ಸ್ ರಸ್ತೆ, ಭಗವತಿ ನಗರ, ಕನ್ನಿಕಾ ಬಡಾವಣೆ, ಚಾಮುಂಡೇಶ್ವರಿ ನಗರ ಮತ್ತಿತರ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಮಳೆಯಿಂದಾಗಿ ಹಾನಿಯಾದ ರಸ್ತೆಗಳನ್ನು ಪರಿಶೀಲಿಸಿದರು.
ಅನಂತರ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಳೆಯ ಕಾರಣದಿಂದಾಗಿ ರಸ್ತೆ ದುರಸ್ತಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಮಳೆಗಾಲ ಮುಗಿದಿದ್ದು ನಗರೋತ್ಥಾನ ಹಾಗೂ ಮಳೆಹಾನಿ ಪರಿಹಾರ ಯೋಜನೆಯಡಿ 28 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಮುಂದಿನ ಮಾರ್ಚ್ ತಿಂಗಳ ಒಳಗಾಗಿ ನಗರದಾದ್ಯಂತ ಸರ್ವಋತು ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸ್ಟೋನ್‌ಹಿಲ್ ಬಳಿ ಇರುವ ನಗರಸಭೆಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಈ ಹಿಂದೆ ಉತ್ತಮ ಪ್ರದೇಶವಾಗಿತ್ತು, ಈಗ ಕಸದ ಬೆಟ್ಟದಂತಾಗಿದೆ. ಈ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಸಿ ಕಸ, ಒಣ ಕಸ ವಿಂಗಡಣೆ ಮಾಡಲು ನಗರಸಭೆ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.
ಶಾಸಕರೊಂದಿಗೆ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ನಗರಸಭಾ ಮಾಜಿ ಸದಸ್ಯ ಪ್ರಕಾಶ್, ಆಯುಕ್ತ ರಮೇಶ್, ಅಭಿಯಂತರ ನಾಗರಾಜ್, ಆರೋಗ್ಯ ನಿರೀಕ್ಷಕ ನಾಚಪ್ಪ ಮತ್ತಿತರರು ಉಪಸ್ಥಿತರಿದ್ದರು