Advertisement

ಅಂಬಾಗಿಲು-ಪೆರಂಪಳ್ಳಿ ರಸ್ತೆ: ಕಿತ್ತು ಹೋದ ಡಾಮರು

11:50 AM Jul 28, 2022 | Team Udayavani |

ಉಡುಪಿ: ಅಂಬಾಗಿಲು-ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಎದ್ದಿರುವ 28ಕ್ಕೂ ಅಧಿಕ ಗುಂಡಿಗಳು ಸವಾರರಿಗೆ ನಿತ್ಯ ಸಂಕಷ್ಟ ನೀಡುತ್ತಿವೆ.

Advertisement

ಪೆರಂಪಳ್ಳಿ ರೈಲ್ವೇ ಮೇಲ್ಸೇತುವೆಯಿಂದ ಮೂಡು ಪೆರಂಪಳ್ಳಿ ಚರ್ಚ್‌ವರೆಗೆ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗಿನ ರಸ್ತೆಗೆ ಒಂದು ಲೇಯರ್‌ ಮಾತ್ರ ಡಾಮರು ಹಾಕಿದ್ದು, 28ಕ್ಕೂ ಅಧಿಕ ಸಣ್ಣ-ದೊಡ್ಡ ಗಾತ್ರದ ಗುಂಡಿಗಳು ವಾಹನ ಸವಾರರಿಗೆ ಸವಾಲು ಸೃಷ್ಟಿಸಿದೆ. ಈಗಾಗಲೇ ಹಾಕಿರುವ ಡಾಮರು ಕೆಲವು ಬದಿಯಲ್ಲಿ ಮಳೆಯೊಂದಿಗೆ ಕಿ ತ್ತು ಕೊಂಡು ಹೋಗಿದೆ. ರಸ್ತೆಯ ಮೇಲೆ ಗುಂಡಿಗಳಿಂದ ಎದ್ದಿರುವ ಪುಡಿಪುಡಿ ಗಾತ್ರದ ಕಲ್ಲುಗಳು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.

ಈ ರಸ್ತೆ ಮಣಿಪಾಲಕ್ಕೆ ಉದ್ಯೋಗ, ಶಿಕ್ಷಣಕ್ಕೆ ಬರುವ ಸಾವಿರಾರು ಮಂದಿಗೆ ಅನುಕೂಲವಾಗಿದ್ದು ಚತುಷ್ಪಥ ಹೊಸ ರಸ್ತೆ ಎಂಬ ಕಾರಣಕ್ಕೆ ವಾಹನಗಳ ವೇಗವು ಹೆಚ್ಚಿರುತ್ತದೆ. ಅದರಲ್ಲಿಯೂ ಉತ್ತಮ ರಸ್ತೆ ಎಂಬ ಕಾರಣದಿಂದ ವೇಗದಲ್ಲಿ ವಾಹನ ಚಲಾಯಿಸಿಕೊಂಡು ಹೋದಾಗ ಅಲ್ಲಲ್ಲಿ ಇರುವ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ವೇಗದ ವಾಹನಗಳು ಗುಂಡಿ ನೋಡಿ ಬ್ರೇಕ್‌ ಹಾಕಿದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಈ ಗುಂಡಿಗಳನ್ನು ಹೀಗೆ ಬಿಟ್ಟರೆ ಮಳೆಗೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ವಿಸ್ತಾರಗೊಂಡು ಅವಾಂತರ ಸೃಷ್ಟಿಸಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಗುಂಡಿಗೆ ಮಳೆ, ವಾರಾಹಿ ಕಾಮಗಾರಿ ಕಾರಣ

ರಸ್ತೆಯ ಗುಂಡಿಗಳು ಬೀಳಲು ಮಳೆ ಮತ್ತು ವಾರಾಹಿ ಕುಡಿಯುವ ನೀರು ಯೋಜನೆ ಕಾಮಗಾರಿಯೂ ಕಾರಣವಾಗಿದೆ. ಗುಂಡಿ ಬಿದ್ದ ಕಡೆಗಳಲ್ಲಿ ವಾರಾಹಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಪೈಪ್‌ ಲೈನ್‌ ಹಾದುಹೋಗಿದೆ. ಒಳ ಭಾಗದಲ್ಲಿ ಪೈಪ್‌ ತುಂಡಾಗಿ ನೀರು ಸೋರಿಕೆಯಾದ ಕಾರಣ ಕೆಲವೆಡೆ ಮಣ್ಣು ಕುಸಿದು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಹೇಳುತ್ತಾರೆ.

Advertisement

ಮಳೆ ಬಿಟ್ಟ ಬಳಿಕ ಕಾಮಗಾರಿ: ಅಂಬಾಗಿಲು-ಪೆರಂಪಳ್ಳಿ ರಸ್ತೆ ಕಾಮಗಾರಿ ಒಂದು ಹಂತದ ಲೇಯರ್‌ ಮಾತ್ರ ಪೂರ್ಣಗೊಂಡಿದೆ. ಶಾಸಕರು ರಸ್ತೆಯನ್ನು ವ್ಯವಸ್ಥಿತವಾಗಿ ಅವಧಿಯೊಳಗೆ ನಿರ್ಮಿಸಬೇಕು ಎಂದು ಸೂಚಿಸಿದ್ದಾರೆ. ಈಗಾಗಲೇ ಗುಂಡಿಗಳು ಬಿದ್ದಿರುವ ಮೊದಲ ಹಂತದ ಲೇಯರ್‌ ರಸ್ತೆಯನ್ನು ಸಂಪೂರ್ಣ ದುರಸ್ತಿಪಡಿಸಿದ ಅನಂತರವೇ ಮುಂದಿನ ಹಂತದ ಕೆಲಸ ನಡೆಯಲಿದೆ. ಅನಂತರ ಸೆಕೆಂಡ್‌ ಲೇಯರ್‌ ಹಾಕಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಇದೂವರೆಗೆ ಈ ರಸ್ತೆ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಯನ್ನು ಮಾಡಿಲ್ಲ. ಡಿಸೆಂಬರ್‌ ಒಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಕಾಲಾವಕಾಶವಿದ್ದು, ಮಳೆ ಬಿಟ್ಟ ಅನಂತರ ಶೀಘ್ರ ಮುಗಿಸುವಂತೆ ತಿಳಿಸಿದ್ದೇವೆ. -ಜಗದೀಶ್‌ ಭಟ್‌, ಎಇಇ, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next