ತುಮಕೂರು: ಕಳೆದ 20 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನನೆ ಗುದಿಗೆ ಬಿದ್ದಿದ್ದ ಅನೇಕ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತುತ ಆದ್ಯತೆ ನೀಡಲಾಗಿದ್ದು, ಮುಂದೆಯೂ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಶಾಸಕ ಡಿ.ಸಿ. ಗೌರಿಶಂಕರ್ ತಿಳಿಸಿದರು.
ಋಣ ತೀರಿಸುವ ಕೆಲಸ: 13 ಕೋಟಿ ರೂ. ವೆಚ್ಚದಲ್ಲಿ ಗ್ರಾಮಾಂತರ ಕ್ಷೇತ್ರದ ಬಸವಣ್ಣನ ಗುಡಿ ಸರ್ಕಲ್‌ನಿಂದ ಹಾದು ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತ ನಾಡಿದ ಅವರು, ಜನರ ಮೂಲಭೂತ ಸೌಲಭ್ಯ ಕಲ್ಪಿಸುವುದೇ ನನ್ನ ಆದ್ಯತೆಯಾಗಿದೆ. ಮತದಾರ ಪ್ರಭುಗಳ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
13 ಕೋಟಿ ರೂ. ವೆಚ್ಚ: ಬಸವಣ್ಣನ ಗುಡಿ ಸರ್ಕಲ್‌ನಿಂದ ಕೌತಮಾರನಹಳ್ಳಿ, ದಿಣ್ಣೆಪಾಳ್ಯ, ಕೊಟ್ಟಿಗೆ ಗೊಲ್ಲಹಳ್ಳಿ, ದೊಡ್ಡೆ ಗೌಡನಪಾಳ್ಯ, ಆದಿಶಕ್ತಿ ಕೆಂಪಮ್ಮನ ದೇವಾಲಯ, ಗುಣಿ ಗೊಲ್ಲಹಳ್ಳಿ, ಐನಾಪೂರ, ನೇರಳಾಪುರ ಗ್ರಾಮದ ಮೂಲಕ ಹಾದು ಹೋಗಿ ಸಾಸಲು ಗ್ರಾಮ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ಈ ಭಾಗದಲ್ಲಿ ಜನರು ಓಡಾಡಲು ಸಾಧ್ಯವಿಲ್ಲದ ಸ್ಥಿತಿ ಇತ್ತು. ಕಳೆದ 20 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಯಿತ್ತು. ಜನರ ಭಾವನೆಗಳಿಗೆ ಸ್ಪಂದಿಸಿ 13 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಡಾಂಬರೀ ಕರಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ನುಡಿದರು. ಈ ರಸ್ತೆ ಅಭಿವೃದ್ಧಿಯಿಂದಾಗಿ ಸಾವಿರಾರು ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಿದ್ದು, ಈ ರಸ್ತೆಯನ್ನು 13 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವುದು ಹರ್ಷ ತಂದಿದೆ ಎಂದರು.
ಗ್ರಾಮಸ್ಥರಿಂದ ಅಭಿನಂದನೆ: ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿಪಡಿಸಲು ಒತ್ತು ನೀಡಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರಿಗೆ ಗ್ರಾಮಸ್ಥರು, ವಿದ್ಯಾರ್ಥಿಗಳು ಅಭಿನಂದಿಸಿದರು. ಜನರ ಸಮಸ್ಯೆ ಆಲಿಸಿದ ಶಾಸಕರು: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಿ.ಸಿ.ಗೌರಿಶಂಕರ್ ಅವರು ಸಾರ್ವ ಜನಿಕರ ಕುಂದುಕೊರತೆ ಆಲಿಸಿ, ಸ್ಥಳದಲ್ಲಿ ಸೂಕ್ತ ಪರಿಹಾರ ಒದಗಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಗೂಳೂರು ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾದ ಪಾಲನೇತ್ರಯ್ಯ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಗೋವಿಂದರಾಜು, ಮಸ್ಕಲ್ ಗ್ರಾಪಂ ಮಾಜಿ ಅಧ್ಯಕ್ಷರಾದ ರೂಪಾ, ಮೋಹನ್ ಕುಮಾರ್, ಗ್ರಾಪಂ ಸದಸ್ಯರು ಗಳಾದ ಪವಿತ್ರ ಶಿವಪ್ರಸಾದ್, ಲೋಕೇಶ್, ಹೇಮಂತ್, ವೆಂಕಟೇಶ್, ಮುಖಂಡರುಗಳಾದ ನಾಗರಾಜು, ಬಸವ ರಾಜು, ಶಿವಣ್ಣ, ನಾಗಣ್ಣ, ರವಿಕಿರಣ್, ಕುಶಾಲ್ ಗೋಪಾಲ್ ಹಾಗೂ ನೂರಾರು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಗ್ರಾಮಾಂತರ ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ. ನನ್ನ ಈ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತಿದ್ದೇನೆ.
– ಡಿ.ಸಿ.ಗೌರಿಶಂಕರ್, ಶಾಸಕ