Advertisement

ಬ್ರೇಕ್‌ ವಾಟರ್‌ ಕಾಮಗಾರಿಯಿಂದ ರಸ್ತೆಗೆ ಹಾನಿ

09:51 PM Sep 23, 2019 | Team Udayavani |

ಗಂಗೊಳ್ಳಿ: ಕಡಲ್ಕೊರೆತ ತಡೆಗಾಗಿ ಗಂಗೊಳ್ಳಿಯಲ್ಲಿ ಕೈಗೊಂಡ ಬ್ರೇಕ್‌ ವಾಟರ್‌ ಕಾಮಗಾರಿ ಸಂಬಂಧಿತ ಘನ ವಾಹನಗಳ ಸಾಗಾಟ ದಿಂದಾಗಿ ಬಂದರಿನ ಆವರಣದ ಒಳಗಿರುವ ಎಲ್ಲ ರಸ್ತೆಗಳ ಸಂಪೂರ್ಣ ಡಾಮರು ಕಿತ್ತು ಹೋಗಿದೆ. ಬ್ರೇಕ್‌ ವಾಟರ್‌ ಕಾಮಗಾರಿಯಲ್ಲಿ 5 ಕೋ.ರೂ. ಅನುದಾನವನ್ನು ರಸ್ತೆ ದುರಸ್ತಿ, ಇನ್ನಿತರ ಪರಿಸರ ಅಭಿವೃದ್ಧಿಗೆ ವಿನಿಯೋಗಿಸಬೇಕು ಎನ್ನುವ ಕರಾರು ಇದ್ದರೂ ರಸ್ತೆ ಡಾಮರಿಗೆ ಮುಂದಾಗುತ್ತಿಲ್ಲ ಎನ್ನುವುದು ಮೀನುಗಾರರ ಆರೋಪ.

Advertisement

ಕೋಡಿಯಲ್ಲಿ ಸುಮಾರು 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ 102 ಕೋ.ರೂ. ಬ್ರೇಕ್‌ ವಾಟರ್‌ ಕಾಮಗಾರಿ ಈಗಾಗಲೇ ಮುಗಿದಿದೆ. ಇದರಲ್ಲಿ ಗಂಗೊಳ್ಳಿ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭಾರೀ ಗಾತ್ರದ ಟೆಟ್ರಾಫೈಡ್‌ಗಳನ್ನು, ಘನ ಗಾತ್ರದ ಕಲ್ಲುಗಳನ್ನು ಸಾಗಾಟ ಮಾಡಲು ಘನ ವಾಹನಗಳು ಇಲ್ಲಿನ ಒಳ ರಸ್ತೆಗಳನ್ನು ಬಳಸಿಕೊಂಡಿದ್ದವು. ಇದರಿಂದ ಈಗ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

5 ರಸ್ತೆಗಳಿಗೆ ಹಾನಿ
ಬ್ರೇಕ್‌ ವಾಟರ್‌ ಕಾಮಗಾರಿ ಸಲುವಾಗಿ ಟೆಟ್ರಾಫೈಡ್‌ ಸಹಿತ ಭಾರೀ ಗಾತ್ರದ ಸರಕು ವಸ್ತುಗಳನ್ನು ಘನ ವಾಹನಗಳ ಮೂಲಕ ಸಾಗಾಟ ಮಾಡಿದ್ದರಿಂದ ಗಂಗೊಳ್ಳಿ ಪರಿಸರದ ಸುಮಾರು 5ಕ್ಕೂ ಹೆಚ್ಚಿನ ಒಳ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿ ಹೋಗಿದೆ. ಕೆಲವು ರಸ್ತೆಗಳಲ್ಲಂತೂ ಡಾಮರೇ ಕಿತ್ತು ಹೋಗಿದೆ. ಮತ್ತೆ ಕೆಲವು ರಸ್ತೆಗಳಲ್ಲಿ ಹೊಂಡಗಳಿಂದಾಗಿ ಸಂಚಾರ ಕಷ್ಟಕರವಾಗಿದೆ. 102 ಕೋ.ರೂ. ಬ್ರೇಕ್‌ವಾಟರ್‌ ಕಾಮಗಾರಿಯಲ್ಲಿ ಗುತ್ತಿಗೆದಾರರು 5 ಕೋ.ರೂ. ರಸ್ತೆ, ಪರಿಸರ ಅಭಿವೃದ್ಧಿಗೆ ಬಳಸಬೇಕು ಎನ್ನುವುದು ಕಾಮಗಾರಿ ಆರಂಭದಲ್ಲೇ ಮಾತುಕತೆಯಾಗಿತ್ತು. ಈಗ ಕಾಮಗಾರಿ ಮುಗಿದಿದೆ. ಆದರೆ ಇಲ್ಲಿನ ರಸ್ತೆ ಅಥವಾ ಪರಿಸರದ ಅಭಿವೃದ್ಧಿ ಸಂಬಂಧ ಈ 5 ಕೋ.ರೂ. ಮಾತ್ರ ಬಳಕೆಯಾದಂತೆ ಕಾಣುತ್ತಿಲ್ಲ.

ಸಂಸದರಿಗೂ ದೂರು
ಬ್ರೇಕ್‌ ವಾಟರ್‌ ಕಾಮಗಾರಿಯ ಅನುದಾನದಲ್ಲಿ ಅಲ್ಪ ಹಣವನ್ನು
ಇಲ್ಲಿನ ಪರಿಸರದ ಅಭಿವೃದ್ಧಿಗೆ ಬಳಸದ ಸಂಬಂಧ ಕಳೆದ ಜೂನ್‌ನಲ್ಲಿ ಗಂಗೊಳ್ಳಿ ಬಂದರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿದಾಗ ಮೀನುಗಾರರು ದೂರು ನೀಡಿದ್ದರು. ಈಗ ಮೀನುಗಾರಿಕೆ ಸಚಿವರು ಇಲ್ಲಿಗೆ ಭೇಟಿ ಕೊಟ್ಟಾಗ ಅವರ ಗಮನಕ್ಕೂ ತರಲಾಗುವುದು ಎಂದು ಇಲ್ಲಿನ ಮೀನುಗಾರರು ತಿಳಿಸಿದ್ದಾರೆ.

ಮೀನುಗಾರಿಕೆ ವಾಹನ ಸಂಚಾರಕ್ಕೆ ತೊಂದರೆ
ಬ್ರೇಕ್‌ ವಾಟರ್‌ ಸಹಿತ ಇನ್ನಿತರ ಕಾಮಗಾರಿಗಾಗಿ ಸರಕು ವಸ್ತುಗಳನ್ನು ಸಾಗಿಸಲು ಇಲ್ಲಿನ ಒಳ ರಸ್ತೆಗಳನ್ನೇ ಬಳಸಿದ್ದರಿಂದ ಅದರ ಡಾಮರೆಲ್ಲ ಕಿತ್ತು ಹೋಗಿದೆ. ನಮ್ಮ ಮೀನುಗಾರಿಕೆಗೆ ಸಂಬಂಧಿಸಿದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿಂದೆ ಡಿಸಿ ಜತೆಗಿನ ಸಭೆಯಲ್ಲಿಯೂ 97 ಕೋ.ರೂ. ವೆಚ್ಚದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ, ಬಾಕಿ ಉಳಿದ 5 ಕೋ.ರೂ. ಹಣವನ್ನು ಇಲ್ಲಿನ ಪರಿಸರ ಸಹಿತ ಇನ್ನಿತರ ಅಭಿವೃದ್ಧಿಗೆ ಬಳಸಬೇಕು ಎಂದು ಗುತ್ತಿಗೆ ವಹಿಕೊಂಡವರಿಗೆ ತಿಳಿಸಿದ್ದರು. ಇನ್ನು ಗುತ್ತಿಗೆದಾರರಿಗೆ ಸ್ವಲ್ಪ ಹಣ ಸಿಗಬೇಕಾಗಿದೆ ಎನ್ನುವ ಮಾಹಿತಿಯಿದ್ದು, ಈ ರಸ್ತೆಗೆ ಮರು ಡಾಮರಾದ ಮಾಡಿದ ಬಳಿಕ ಆ ಅನುದಾನ ಬಿಡುಗಡೆ ಮಾಡಲಿ.
-ರವಿಶಂಕರ್‌ ಖಾರ್ವಿ,ಮೀನುಗಾರ ಮುಖಂಡರು, ಗಂಗೊಳ್ಳಿ

Advertisement

ಶೀಘ್ರ ದುರಸ್ತಿಗೆ ಕ್ರಮ
ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 5 ಕೋ.ರೂ. ಅನುದಾನವನ್ನು ಅಲ್ಲಿನ ರಸ್ತೆ, ಪರಿಸರ ಅಭಿವೃದ್ಧಿಗೆ ವಿನಿಯೋಗಿಸಬೇಕು ಎನ್ನುವ ಕರಾರು ಆಗಿದ್ದರೂ ಅವರು
ಈ ಬಗ್ಗೆ ಗಮನವೇ ಹರಿಸಿಲ್ಲ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ,
ಗುತ್ತಿಗೆದಾರರನ್ನು ಕರೆದು ಮರು ಡಾಮರುಗೊಳಿಸಲು ಸೂಚಿಸಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ,ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next