Advertisement

ಶಿರಾಡಿ ಘಾಟಿ ರಸ್ತೆಯಲ್ಲಿ ಬಿರುಸಿನ ಕಾಮಗಾರಿ

08:30 AM Mar 31, 2018 | Karthik A |

ಉಪ್ಪಿನಂಗಡಿ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಕ್ಷಿಪ್ರಗತಿಯಿಂದ ನಡೆಯುತ್ತಿದ್ದು, ಮೇ ಅಂತ್ಯದ ಒಳಗೆ ಪೂರ್ಣಗೊಂಡು ಜೂನ್‌ ಆರಂಭದಲ್ಲಿ ಸಂಚಾರಕ್ಕೆ ಮುಕ್ತವಾಗುವ ಭರವಸೆ ಕಂಡುಬಂದಿದೆ. ರಾ. ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 13 ಕಿ.ಮೀ. ಕಾಂಕ್ರೀಟ್‌ ರಸ್ತೆ 2ನೇ ಹಂತದ ಕಾಮಗಾರಿಗೆ 74 ಕೋ. ರೂ. ಮಂಜೂರು ಆಗಿದ್ದು, ಜರ್ಮನಿಯಿಂದ ತರಿಸಲಾದ ಹೊಸ ಯಂತ್ರವನ್ನು ಬಳಸಿ ಆಧುನಿಕ ತಂತ್ರಜ್ಞಾನ ಆಧರಿಸಿ ಕಾಮಗಾರಿ ಬಹಳ ವೇಗವಾಗಿ ಸಾಗುತ್ತಿದೆ. ಈ ರಸ್ತೆಯಲ್ಲಿ 77 ಮೋರಿಗಳಿದ್ದು, 74 ಮೋರಿ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 3 ಸೇತುವೆಗಳ ವಿಸ್ತರಣೆಯೂ ನಡೆಯುತ್ತಿದೆ.

Advertisement

ಅತ್ಯಾಧುನಿಕ ಜರ್ಮನ್‌ ಯಂತ್ರ ಬಳಕೆ
ಕಾಮಗಾರಿಯ ಸಲುವಾಗಿ ಜರ್ಮನಿಯಿಂದ 10 ಕೋ. ರೂ. ಮೌಲ್ಯದ ವಿರ್ಟ್‌ಜನ್‌ ಕಂಪೆನಿಯ ಟಿಸಿಎಂ-180 ಸೆನ್ಸರ್‌ ಪೇವರ್‌ ಯಂತ್ರವನ್ನು ತರಿಸಲಾಗಿದೆ. ಇದರ ಮೂಲಕ ತಳಮಟ್ಟದ ಗ್ರ್ಯಾನುಲಾರ್‌ ಸಬ್‌ಬೇಸ್‌ (ಜಿ.ಎಸ್‌.ಬಿ.), ಅದಕ್ಕಿಂತ ಮೇಲಿನ ಡ್ರೈ ಲೀನ್‌ ಕಾಂಕ್ರೀಟ್‌ (ಡಿ.ಎಲ್‌.ಸಿ.) ಹಾಗೂ ಅಂತಿಮವಾದ ಪೇವ್‌ಮೆಂಟ್‌ ಕ್ವಾಲಿಟಿ ಕಾಂಕ್ರೀಟ್‌ (ಪಿ.ಕ್ಯೂ.ಸಿ.) ಈ 3 ಹಂತಗಳಲ್ಲಿ 600 ಎಂ.ಎಂ. ದಪ್ಪದಲ್ಲಿ ಪ್ರತಿದಿನ 2ರಿಂದ 3 ಕಿ.ಮೀ. ಉದ್ದಕ್ಕೆ ಕಾಂಕ್ರೀಟೀಕರಣ ನಡೆಯುತ್ತಿದೆ. ಈಗಾಗಲೇ ಎಡ ಮತ್ತು ಬಲ ಬದಿಯಲ್ಲಿ ಸುಮಾರು 3 ಕಿ. ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ 9 ಕಿ. ಮೀ. ಜಿ.ಎಸ್‌.ಬಿ. ಹಂತದಲ್ಲಿ ಹಾಗೂ 3 ಕಿ. ಮೀ. ಡಿ.ಎಲ್‌.ಸಿ. ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ ಸುರೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಕಾಂಕ್ರೀಟ್‌ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಮಣ್ಣಿನ ಕಣಗಳು ಸೇರಿಕೊಳ್ಳದಂತೆ ತಡೆಯಲು ಕಾಮಗಾರಿ ಆರಂಭಕ್ಕೆ ಮುನ್ನ ರಸ್ತೆಗೆ ಮಣ್ಣಿನ ಮೇಲೆ ಜಿಯೋ ಟೆಕ್ಸ್‌ಟೈಲ್‌ ಹಾಸಲಾಗಿದೆ. ಘಾಟಿ ಪ್ರದೇಶವಾಗಿರುವುದರಿಂದಾಗಿ ನೀರಿನ ಒರತೆ ತಡೆಗಟ್ಟುವ ಸಲುವಾಗಿ ಪ್ರತೀ 25 ಮೀ. ಅಂತರದಲ್ಲಿ ಕ್ರಾಸ್‌ ಫಿಲ್ಟರ್‌ ಡ್ರೈನೇಜ್‌ ವ್ಯವಸ್ಥೆ ಮಾಡಲಾಗುತ್ತಿದೆ, ರಸ್ತೆ ತಗ್ಗು ಇರುವ ಪ್ರದೇಶಗಳಿಗೆ ನೆಲ್ಯಾಡಿ ಕಡೆಯಿಂದ ಗಟ್ಟಿ ಮಣ್ಣು ತಂದು ಹಾಕಲಾಗುತ್ತಿದೆ. ಕಾಮಗಾರಿ ಹಂತ ಹಂತವಾಗಿ ಅತಿ ವೇಗದಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಪುರಾತನ ಸಮಸ್ಯೆ – ಶಿರಾಡಿ ರಸ್ತೆ
ಬಹಳ ಹಿಂದಿನಿಂದಲೂ ಶಿರಾಡಿ ಘಾಟಿ ಸಂಚಾರ ಚಾಲಕರಿಗೂ ಪ್ರಯಾಣಿಕರಿಗೂ ನುಂಗಲೂ ಉಗುಳಲೂ ಆಗದ ತುತ್ತಾಗಿತ್ತು. ಘಟ್ಟದ ನಡುವೆ ಹಾದು ಹೋಗುವ ಕಿರಿದಾದ ಡಾಮರ್‌ ರಸ್ತೆಯ ಮೂಲಕ ಸಕಲೇಶಪುರದ ಮಾರನಹಳ್ಳಿ ಸೇರುವುದೇ ಒಂದು ಹರ ಸಾಹಸವಾಗಿದ್ದು ಘಾಟಿ ಸಂಚಾರಕ್ಕೆ ಮೂರು ತಾಸು ವ್ಯಯವಾಗುತ್ತಿತ್ತು. ಮಳೆಗಾಲ ಆರಂಭವಾದರೆ ಸಾಕು, ಕಿರಿದಾದ ಡಾಮರು ರಸ್ತೆಯಲ್ಲಿ ಹೊಂಡಗಳು ಉಂಟಾಗಿ ತೇವಾಂಶದಿಂದ ರಸ್ತೆ ಬಿರುಕು ಬಿಡುತ್ತಿತ್ತು. ಆದರೆ ಈ ಬಾರಿ ಶಾಶ್ವತ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿ ಏಕಕಾಲದಲ್ಲಿ ಎರಡು ವಾಹನಗಳು ಸುಗಮವಾಗಿ ಸಂಚಾರ ನಡೆಸಲು ಯೋಗ್ಯವಾಗುವಂತೆ ರಸ್ತೆ ನಿರ್ಮಾಣ ನಡೆಯುತ್ತಿದೆ. ವಾಹನಗಳಿಗೆ ಸಂಚಾರ ಕಾಲದಲ್ಲಿ ರಸ್ತೆ ಹಿಡಿತ ಉಂಟಾಗಲು ಮತ್ತು ಹತೋಟಿಗೆ ಸಂಪೂರ್ಣ ರಸ್ತೆಯನ್ನು ಒರಟುಗೊಳಿಸಲಾಗಿದೆ. ಈಗಾಗಲೇ ನಾಲ್ಕಕ್ಕೂ ಹೆಚ್ಚು ತಿರುವುಗಳನ್ನು ನೇರಗೊಳಿಸಲಾಗಿದೆ.

ಕೇಂದ್ರ ಹೆದ್ದಾರಿ ಇಲಾಖೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂ. ಅನುದಾನವನ್ನು ವರ್ಷವೂ ಈ ರಸ್ತೆಯ ಡಾಮರೀಕರಣಕ್ಕೆ ಬಳಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಈ ಬಾರಿಯ ಕಾಂಕ್ರೀಟೀಕರಣದಿಂದ ಶಾಶ್ವತ ಪರಿಹಾರ ಒದಗಲಿದೆ ಎಂಬ ಭರವಸೆ ರಸ್ತೆ ಬಳಕೆದಾರರದು. 

Advertisement

ಗುಣಮಟ್ಟದ ಕಾಮಗಾರಿ – ಪ್ರಶಂಸೆ
ಮೊದಲ ಹಂತದ ಕಾಮಗಾರಿಯಾಗಿ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ. ಮೀ. ಕಾಂಕ್ರೀಟೀಕರಣ 69.90 ಕೋ. ರೂ. ವೆಚ್ಚದಲ್ಲಿ ಆಗಿದ್ದು, ಇದನ್ನು ಇದೇ ಓಷಿಯನ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆ ನಿರ್ವಹಿಸಿತ್ತು. ಕಾಮಗಾರಿ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಹೆದ್ದಾರಿ ಇಲಾಖೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಕಾಮಗಾರಿ ಸಲುವಾಗಿ ಜ. 12ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ತಮ ಗುಣಮಟ್ಟದೊಂದಿಗೆ ಅತೀ ವೇಗದಲ್ಲಿ ಕಾಮಗಾರಿ ನಡೆದು ಆದಷ್ಟು ಬೇಗ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮೇ ಅಂತ್ಯದ ಒಳಗಾಗಿ ಪೂರ್ಣ: ಓಷಿಯನ್‌ ಕನ್‌ಸ್ಟ್ರಕ್ಷನ್‌
ಕಾಮಗಾರಿ ಪೂರ್ಣಗೊಳಿಸಲು ಸರಕಾರ ನೀಡಿರುವ ಗಡುವು ಮುಂದಿನ ಆಗಸ್ಟ್‌ ತನಕ ಇದೆ. ಆದರೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇ ಅಂತ್ಯ ಅಥವಾ ಜೂನ್‌ ತಿಂಗಳ ಆರಂಭದಲ್ಲಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಿ ಕೊಡಲಾಗುವುದು ಎಂದು ಕಾಮಗಾರಿ ನಿರ್ವಹಿಸುತ್ತಿರುವ ಓಷಿಯನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಪ್ರೈ. ಲಿ. ಸಂಸ್ಥೆಯ ನಿರ್ದೇಶಕ ಶರ್ಫುದ್ದೀನ್‌ ತಿಳಿಸಿದ್ದಾರೆ.

ವಿಶೇಷ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ: ರಾಘವನ್‌
ಶಿರಾಡಿ ಘಾಟಿ ಪ್ರದೇಶದಲ್ಲಿ ವರ್ಷದ 6 ತಿಂಗಳು ನಿರಂತರ ಮಳೆ ಸುರಿಯುತ್ತಿರುತ್ತದೆ. ಬಂಡೆ ಕಲ್ಲುಗಳ ಮಧ್ಯದಿಂದ ಸದಾ ನೀರು ಜಿನುಗುತ್ತಿರುವುದು ಮತ್ತು ನೀರಿನ ಒರತೆಯಿಂದಾಗಿ ಮಣ್ಣು ಮೃದುವಾಗಿರುತ್ತದೆ. ಆದ್ದರಿಂದ ವಿಶೇಷ ತಂತ್ರಜ್ಞಾನ ಬಳಸಿಕೊಂಡು ದೃಢವಾದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಕ್ಷಿಪ್ರವಾಗಿ ನಡೆಯುತ್ತಿದ್ದು, ಮೇ ತಿಂಗಳ ಕೊನೆಗೆ ರಸ್ತೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ರಾ. ಹೆ. ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್‌ ರಾಘವನ್‌ ತಿಳಿಸಿದ್ದಾರೆ.

– 13 ಕಿ.ಮೀ. ಘಾಟಿ ರಸ್ತೆ
– 74 ಮೋರಿ ಕಾಮಗಾರಿ ಪೂರ್ಣ, 3 ಸೇತುವೆ ವಿಸ್ತರಣೆ
– ಸದೃಢ ಶಾಶ್ವತ ರಸ್ತೆಯ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next