ಬಂಟ್ವಾಳ: ತಾಲೂಕಿನ ಮಣಿಹಳ್ಳದಿಂದ ವಾಮದಪದವು ಸಂಪರ್ಕಿಸುವ ರಸ್ತೆಯು ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೊಂಗ್ರಬೆಟ್ಟು-ಮಣಿ ಮಧ್ಯೆ ಒಂದು ಭಾಗದಲ್ಲಿ ಕುಸಿದಿದ್ದು, ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ರಸ್ತುತ ಮಳೆಗಾಲ ಆಗಮಿಸುತ್ತಿರುವುದರಿಂದ ಕುಸಿದ ರಸ್ತೆಯನ್ನು ಹಾಗೇ ಬಿಟ್ಟಲ್ಲಿ ಮತ್ತಷ್ಟು ಕುಸಿಯುವ ಭೀತಿ ಸೃಷ್ಟಿಯಾಗಿದೆ.
ಮಣಿಹಳ್ಳ-ವಾಮದಪದವು ರಸ್ತೆಯಲ್ಲಿ ದಿನನಿತ್ಯ ಬಸ್, ಲಾರಿಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ವಾಹನ ಚಾಲಕರು/ಸವಾರರು ಕೊಂಚ ಎಚ್ಚರಿಕೆ ತಪ್ಪಿದರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. ರಸ್ತೆಯ ಅಂಚು ಕುಸಿದಿರುವ ಭಾಗದಲ್ಲಿ ಆಳವಾದ ಚರಂಡಿ ಇದ್ದು, ಅಪಾಯದ ಸಾಧ್ಯತೆ ಹೆಚ್ಚಾಗಿದೆ.
ಹಿಂದೊಮ್ಮೆ ಇದೇ ಪರಿಸ್ಥಿತಿ ಉಂಟಾದಾಗ ಸ್ಥಳೀಯರ ದೂರಿನ ಮೇರೆಗೆ ಕುಸಿದ ಜಾಗಕ್ಕೆ ಮಣ್ಣು ತುಂಬಿಸುವ ಕಾರ್ಯ ಮಾಡಲಾಗಿತ್ತು. ಆದರೆ ನಿರಂತರ ಮಳೆಯ ಪರಿಣಾಮ ಪ್ರಸ್ತುತ ಮಣ್ಣೆಲ್ಲಾ ಕೊಚ್ಚಿ ಹೋಗಿ ಹಿಂದಿನ ಸ್ಥಿತಿ ಉಂಟಾಗಿದೆ.
ತಡೆಗೋಡೆ ಅಗತ್ಯ
ಕುಸಿದಿರುವ ಭಾಗಕ್ಕೆ ಕಲ್ಲು ಅಥವಾ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿದರೆ ಮಾತ್ರ ಶಾಶ್ವತ ಪರಿಹಾರ ಕಾಣಬಹುದಾಗಿದೆ. ಈ ರಸ್ತೆಯು ಪುರಸಭೆಗೆ ಸಂಬಂಧಪಡದೇ ಇರುವುದರಿಂದ ಪುರಸಭೆಯಿಂದ ದುರಸ್ತಿ ಮಾಡುವುದಕ್ಕೆ ಅವಕಾಶವಿಲ್ಲ. ಹಿಂದೊಮ್ಮೆ ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರೂ ಈಗ ಅವಶೇಷವಾಗಿದೆ. ಶಾಶ್ವತ ಪರಿಹಾರ ಕಲ್ಪಿಸುವುದು ಅತೀ ಅಗತ್ಯವಾಗಿದೆ ಎಂದು ಸ್ಥಳೀಯ ಪುರಸಭಾ ಸದಸ್ಯೆ ಮೀನಾಕ್ಷಿ ಕಾಳಜಿ ಜೆ.ಗೌಡ ಆಗ್ರಹಿಸಿದ್ದಾರೆ.