ಬೆಳಗಾವಿ: ಲಾಕ್‌ಡೌನ್ ಮಧ್ಯೆ ಖಾಲಿ ಕುಳಿತು ಸಮಯ ವ್ಯರ್ಥ ಮಾಡದೇ ತಮ್ಮ ಹೊಲಗಳಿಗೆ ಹೋಗುವ 2.5 ಕಿ.ಮೀ. ರಸ್ತೆಗಾಗಿ ರೈತರೇ ತಮ್ಮ ಕೈಯಿಂದ ಹಣ ವೆಚ್ಚ ಮಾಡಿ, ಅವರೇ ಕಲ್ಲು-ಮಣ್ಣು ಹೊತ್ತು ಸುಸಜ್ಜಿತ ರಸ್ತೆ ನಿರ್ಮಿಸುವ ಮೂಲಕ ಸರ್ಕಾರಕ್ಕೆ ತೊಡೆ ತಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ಮಾರೀಹಾಳ ಗ್ರಾಮದ ರೈತರು ತಮ್ಮ ಹೊಲಗಳಿಗೆ ಹೋಗಲು ನಿತ್ಯ ಪರದಾಡುತ್ತಿದ್ದರು. ಕಳೆದ ಸಲ ಅಪ್ಪಳಿಸಿದ್ದ ಪ್ರವಾಹದಲ್ಲಿ ಇಡೀ ಮಣ್ಣಿನ ರಸ್ತೆ ಕಿತ್ತು ನಡೆದಾಡುವುದೇ ದುಸ್ತರವಾಗಿತ್ತು. ಇಂಥದರಲ್ಲಿ ಮುಂಬರುವ ಮಳೆಗಾಲದಲ್ಲಿ ಕಷ್ಟ ಪಡಬಾರದೆಂಬ ಉದ್ದೇಶದಿಂದ ರೈತರೇ ಬೆಳಗ್ಗೆಯಿಂದ ಸಂಜೆವರೆಗೆ ಬೆವರು ಸುರಿಸಿ ದುಡಿದು ರಸ್ತೆ ನಿರ್ಮಿಸಿ ಮಾದರಿಯಾಗಿದ್ದಾರೆ.
ಮಾರೀಹಾಳ ಗ್ರಾಮದ ಶ್ರೀ ಪತ್ರಿ ಬಸವಣ್ಣ ದೇವಸ್ಥಾನದಿಂದ ಮೋದಗಾ ಗ್ರಾಮದ ಹೊಲಗಳಿಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿತ್ತು. ಕಳೆದ 15 ವರ್ಷಗಳಿಂದ ರೈತರು ನಿತ್ಯ ಸಂಕಟ ಪಡುತ್ತಿದ್ದರು. ರಸ್ತೆ ನಿರ್ಮಿಸುವಂತೆ ಸಂಸದರು, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಬಳಿ ಕೈ ಮುಗಿದು ಬೇಡಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ.
ಶಿಫ್ಟ್ ಪ್ರಕಾರ ದುಡಿದ ರೈತರು: ಈ ರಸ್ತೆಗೆ ಹೊಂದಿಕೊಂಡು 250ಕ್ಕೂ ಹೆಚ್ಚು ರೈತರ ಗದ್ದೆಗಳು ಇವೆ. ಪ್ರತಿಯೊಬ್ಬ ರೈತರಿಂದ 2-3 ಸಾವಿರ ರೂ. ಸಂಗ್ರಹಿಸಿಕೊಂಡು 400 ಟ್ರಿಪ್ ಕಲ್ಲು ಹಾಗೂ 400 ಟ್ರಿಪ್ ಟ್ರ್ಯಾಕ್ಟರ್ ಕೆಂಪು ಮಣ್ಣು ತಂದಿದ್ದಾರೆ. ಕಳೆದ ಆರೇಳು ದಿನಗಳಿಂದ 40 ಜನ ರೈತರ ತಂಡ ಶಿಫ್ಟ್ ಪ್ರಕಾರ ಕೆಲಸ ಮಾಡಿ ಬಹುತೇಕ ರಸ್ತೆ ಕೆಲಸ ಮುಗಿಸಿದೆ. 15 ಅಡಿ ಅಗಲ ಹಾಗೂ ಆರು ಅಡಿ ಎತ್ತರದಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡು ಮುಂಬರುವ ಮಳೆಯಿಂದ ಎದುರಾಗುವ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.
ಖಾಲಿ ಕೂರದೇ ಕೆಲಸ ಮಾಡಿದ್ರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ರೈತರಿಗೆ ಕೃಷಿ ಚಟುವಟಿಕೆ ಅಷ್ಟಕ್ಕಷ್ಟೇ ಇತ್ತು. ಜತೆಗೆ ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಶ್ರೀ ಬಸವೇಶ್ವರರ ಜಾತ್ರೆ ಇತ್ತು. ಜಾತ್ರೆ ವೇಳೆ ಗ್ರಾಮದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ವಾರ ಬಿಡಲಾಗುತ್ತದೆ. ಈ ಸಲದ ಜಾತ್ರೆ ಲಾಕ್‌ಡೌನ್ ದಿಂದಾಗಿ ರದ್ದು ಮಾಡಲಾಗಿತ್ತು. ಇಂಥದರಲ್ಲಿ ರೈತರಿಗೆ ಖಾಲಿ ಕೂರುವುದಕ್ಕಿಂತ ತಾವೇ ಸ್ವತಃ ರಸ್ತೆ ನಿರ್ಮಿಸಬೇಕೆಂಬ ಯೋಚನೆ ಹೊಳೆದಿದೆ. ಸರ್ಕಾರದವರು ಗ್ರಾಮ, ಪಟ್ಟಣವನ್ನೇ ಕೇಂದ್ರೀಕರಿಸಿಕೊಂಡು ಕೆಲಸ ಮಾಡುತ್ತಾರೆ ಹೊರತು ಹೊಲದಲ್ಲಿರುವ ರಸ್ತೆ ಮಾಡೋದಿಲ್ಲ. ಹೀಗಾಗಿ ನಾವೆಲ್ಲ ಸೇರಿಕೊಂಡು ರಸ್ತೆ ನಿರ್ಮಿಸುವ ಮೂಲಕ ನಿರಾಳರಾಗಿದ್ದೇವೆ ಎನ್ನುತ್ತಾರೆ ರೈತರಾದ ಈರಣ್ಣ ಮತ್ತು ಉದಯ ಮಲ್ಲನ್ನವರ.
ಹೊಲದ ಮಧ್ಯ ಭಾಗದಲ್ಲಿರುವ ಈ ರಸ್ತೆ ನಿರ್ಮಾಣಕ್ಕಾಗಿ ಅನೆಕ ಜನಪ್ರತಿನಿಧಿ ಗಳ ಗಮನಕ್ಕೆ ತರಲಾಗಿದೆ. 15 ವರ್ಷಗಳಿಂದ ಅಲೆದಾಡಿದರೂ ರಸ್ತೆ ಮಾತ್ರ ನಿರ್ಮಾಣವಾಗಿರಲಿಲ್ಲ. ಕಳೆದ ವರ್ಷದ ಭಾರೀ ಮಳೆಯಿಂದ ಮಣ್ಣೆಲ್ಲ ಕಿತ್ತು ಹೋಗಿತ್ತು. ಈಗ ಲಾಕ್‌ಡೌನ್‌ನಲ್ಲಿ ನಾವೆಲ್ಲ ಸೇರಿಕೊಂಡು ಕೈಯಿಂದ ಹಣ ಕೂಡಿಸಿ ಲಕ್ಷಾಂತರ ರೂ. ಖರ್ಚು ಮಾಡಿ ರಸ್ತೆ ನಿರ್ಮಿಸಿದ್ದೇವೆ.
-ಮಲ್ಲಿಕಾರ್ಜುನ ಮಾದಮ್ಮನವರ, ರೈತ ಮುಖಂಡರು
ಖಾಲಿ ಕುಂತ ಟೈಮ್ ವೇಸ್ಟ್ ಮಾಡೋದಕ್ಕಿಂತ ನಾವ ಎಲ್ಲಾರೂ ಕೈಯಿಂದ ರೊಕ್ಕಾ ಹಾಕಿ ರಸ್ತಾ ಮಾಡ್ಕೊಳ್ಳಾಕತೇವ. ಮುಂದ ಮಳಿ ಬಂತಂದ್ರ ನಮ್ಮ ಹೊಲಾ ಅತ್ತ, ನಾವ ಇತ್ತ ಆಗತಿದ್ರು. ಹೆಂಗರೇ ಮಾಡಿ ರಸ್ತಾ ಮಾಡೋಣು ಅಂತ ಎಲ್ಲಾರೂ ಒಂದಾಗಿ ದುಡದ ರಸ್ತಾ ಮಾಡಕೊಂಡ ಪಾರ ಆಗೇವ.
-ಸಿದ್ದಯ್ಯ ಪೂಜೇರಿ, ರೈತರು
-ಭೈರೋಬಾ ಕಾಂಬಳೆ