ಚಿಂಚೋಳಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆ ಮತ್ತು ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ರಸ್ತೆ, ಸೇತುವೆ ನಿರ್ಮಿಸಿ ಹಳ್ಳಿಯ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಶಾಸಕ ಡಾ|ಅವಿನಾಶ ಜಾಧವ ಹೇಳಿದರು.
ತಾಲೂಕಿನ ಚಿಮ್ಮನಚೊಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ 2020-21ನೇ ಸಾಲಿನ 4701 ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಗ್ರಾಮದ ಹತ್ತಿರ 1.34 ಕೋಟಿ 20ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ, ಸಾಲೇಬೀರನಳ್ಳಿ ಗ್ರಾಮದಿಂದ ಕೊಳ್ಳುರ ಕ್ರಾಸ್ ವರೆಗೆ 4.30ರಿಂದ 7ಕಿ.ಮೀ ವರೆಗೆ 5ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅವುಗಳ ಸುಧಾರಣೆ ಮಾಡಲಾಗುತ್ತಿದೆ. ಕೊಳ್ಳುರ-ಎಂಪಳ್ಳಿ,ಮರಪಳ್ಳಿ ರಸ್ತೆ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ 5 ಕೋಟಿ ರೂ.ಅನುದಾನ ನೀಡಲಾಗಿದೆ. ಪ್ರವಾಸಿ ತಾಣ ಚಂದ್ರಂಪಳ್ಳಿಯಿಂದ ಐನೋಳಿ-ಬೀದರ ಕ್ರಾಸ್ ವರೆಗೆ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಮಾಡಲು 5 ಕೋಟಿ ರೂ. ನೀಡಲಾಗಿದೆ ಎಂದರು.
ಇಇ ಕೃಷ್ಣ ಅಗ್ನಿಹೋತ್ರಿ ಮಾತನಾಡಿ, ತಾಲೂಕಿನಲ್ಲಿ ಸರ್ಕಾರದಿಂದ ಅನೇಕ ಯೋಜನೆಗಳ ಅಡಿ ಹಲವು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.
ಎಇಇ ಆನಂದ ಕಟ್ಟಿ ಮಾತನಾಡಿ, ತಾಲೂಕಿನಲ್ಲಿ ಕೈಗೊಂಡಿರುವ ರಸ್ತೆ ಸುಧಾರಣೆ ಕುರಿತು ಮಾಹಿತಿ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಶೈಲೇಶ ಹುಲಿ, ಸತೀಶರೆಡ್ಡಿ ತಾಜಲಾಪುರ, ಜೆಇ ರೇವಣಸಿದ್ಧಪ್ಪ ಹದನೂರ, ಸಂತೋಷರೆಡ್ಡಿ, ಕಿರಣರೆಡ್ಡಿ ಮಿರಿಯಾಣ, ಶಾಂತುರೆಡ್ಡಿ ನರನಾಳ, ರಾಕೇಶ ಗೋಸುಲ್, ಗ್ರಾಪಂ ಅಧ್ಯಕ್ಷೆ ಜಿಮ್ಮಿಬಾಯಿ, ಲಕ್ಷ್ಮಣ ಆವಂಟಿ ಇನ್ನಿತರರಿದ್ದರು. ಎಇಇ ಆನಂದ ಕಟ್ಟಿ ಸ್ವಾಗತಿಸಿದರು.