Advertisement

ವಾರಬಂದಿ ಪದ್ದತಿ ತಿದ್ದುಪಡಿಗಾಗಿ ರಸ್ತೆ ತಡೆ-ಪ್ರತಿಭಟನೆ

03:44 PM Dec 06, 2021 | Team Udayavani |

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ವಾರಬಂದಿ ಪದ್ಧತಿ ತಿದ್ದುಪಡಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳು ರವಿವಾರ ಸಿರವಾರ ಕ್ರಾಸ್‌ ಹತ್ತಿರ ರಸ್ತತಡೆ ಪ್ರತಿಭಟನೆ ನಡೆಸಿ ನೀರಾವರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ರಾಜ್ಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ಮಾತನಾಡಿ, ಡಿ.8ರಿಂದ 17ವರೆಗೆ ನೀರು ಬಿಡುವುದಾಗಿ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ. ಇಂತಹ ಅವೈಜ್ಞಾನಿಕ ಪದ್ಧತಿಯಿಂದ ಮೆಣಸಿನಕಾಯಿ, ಶೇಂಗಾ, ಜೋಳ, ಹತ್ತಿ ಬೆಳೆಗಾರರಿಗೆ ನೀರಿನ ಅಭಾವ ಎದುರಾಗಲಿದೆ ಎಂದು ದೂರಿದರು.

ಕೊನೆ ಭಾಗದ ರೈತರ ಬೆಳೆಗಳಿಗೆ ನೀರು ಮುಟ್ಟುವುದೇ ಡೌಟ್‌. ಹೀಗಾಗಿ ಅಧಿಕಾರಿಗಳು ವೈಜ್ಞಾನಿಕ ಪದ್ಧತಿ ಮೂಲಕವೇ ನೀರು ಹರಿಸಬೇಕು ಎಂದು ಹೇಳಿದರು.

ಈಗಾಗಲೇ 300 ಕ್ಯೂಸೆಕ್‌ ನೀರು ನಾಲೆಗೆ ಬಿಡಲಾಗಿದೆ. ಕೊನೆ ಭಾಗದ ರೈತರ ಜಮೀನಿಗೆ ಮುಟ್ಟಲು ಎರಡ್ಮೂರು ದಿನ ಬೇಕಾಗುತ್ತದೆ. ಮೆಣಸಿನಕಾಯಿ ಬೆಳೆ ಬಾಡಿ ನಿಂತಿವೇ. ಇಂತಹ ಸಮಸ್ಯೆ ಕುರಿತು ಅಧಿಕಾರಿಗಳು ಎಚ್ಚರವಹಿಸಬೇಕು. ನಾರಾಯಣಪುರ ಬಲದಂಡೆ ಕಾಲುವೆಗಳ ನವೀಕರಣ ಕಾಮಗಾರಿ ಕೊಡಲೇ ನಿಲ್ಲಿಸಬೇಕು. ಒಂದೇ ವೇಳೆ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಲು ಹಿಂದೇಟು ಹಾಕಿದ್ದಲ್ಲಿ ರೈತರೇ ಕಾಮಗಾರಿ ಸ್ಥಳಕ್ಕೆ ಹೋಗಿ ನಿಲ್ಲಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ರೈತರ ಹಿತ ದೃಷ್ಟಿಯಿಂದ ಎಲ್ಲ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐಸಿಸಿ ಸಭೆಯನ್ನು ಮೊತ್ತೂಮ್ಮೆ ಕರೆಯಬೇಕು ಎಂದು ಮನವಿ ಮಾಡಿದರು.

Advertisement

ನಾರಾಯಣಪುರ ಬಲದಂಡೆ ನಾಲೆಗೆ ವಾರಬಂದಿ ಪದ್ಧತಿ ತಿದ್ದುಪಡಿ ಮಾಡಬೇಕು ಎಂದು ರೈತ ಸಂಘಟನೆ ಮುಖಂಡರು ಸಿರವಾರ ಕ್ರಾಸ್‌ ಹತ್ತಿರದಲ್ಲಿ ನಡೆಸಿದ ರಸ್ತೆತಡೆ ಪ್ರತಿಭಟನೆಯಿಂದ ತಾಸುಗಟ್ಟಲೇ ಪ್ರಯಾಣಿಕರು ಪರದಾಡುವಂತ ಸ್ಥಿತಿ ಎದುರಾಯಿತು. ದೇವದುರ್ಗದಿಂದ ರಾಯಚೂರಿಗೆ, ಸಿರವಾರ, ಮಾನ್ವಿ, ಅರಕೇರಾ, ರಾಯಚೂರಿನಿಂದ ಪಟ್ಟಣಕ್ಕೆ ಬರುವಂತ ಬಸ್‌ ಗಳು ಎಲ್ಲೆಂದರಲ್ಲಿ ಸ್ಥಗಿತವಾಗಿದ್ದರಿಂದ ದೂರ ಊರುಗಳಿಗೆ ಹೋಗುವ ಪ್ರಯಾಣಿಕರು ತಾಸುಗಟ್ಟಲೇ ಪರಿತಾಪಿಸುವಂತಾಯಿತು. ಇನ್ನು ಬೈಕ್‌ ಸವಾರರು, ಟಂಟಂ ವಾಹನಗಳು ಲಾರಿಗಳ ಚಾಲಕರು ಸಮಸ್ಯೆ ಎದುರಿಸಿದ ಘಟನೆ ಜರುಗಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್‌, ವಿ.ಭೀಮೇಶ್ವರರಾವ್‌, ಮಲ್ಲಪ್ಪಗೌಡ, ಮಲ್ಲಪ್ಪ ಪೂಜಾರಿ, ರಮೇಶ ಅಬಕಾರಿ, ಶರಣಪ್ಪ ಹುಸೇನ್‌ಪುರ, ಸಾಬಣ್ಣ, ಜೆಡಿಎಸ್‌ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್‌, ಜಿಪಂ ಮಾಜಿ ಸದಸ್ಯ ಶರಬಣ್ಣಸಾಹು, ಬನ್ನಯ್ಯ, ಚೆನ್ನಪ್ಪಗೌಡ, ಬೂದೆಪ್ಪ ಪೂಜಾರಿ, ಬಷಿರ್‌ ಮಹ್ಮದ್‌ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next