ಗುಂಡ್ಲುಪೇಟೆ: ಬಿತ್ತನೆಯ ಸಣ್ಣ ಈರುಳ್ಳಿಗೆ ಕಳೆದ ವಾರಕ್ಕಿಂತ ಈ ವಾರ ದುಪ್ಪಟ್ಟು ಬೆಲೆ ಕೇಳಿದ್ದರಿಂದ ಕಮೀಷನ್ ಏಜೆಂಟರ ವಿರುದ್ಧ ರೈತರು ರಸ್ತೆ ತಡೆ ನಡೆಸಿದ ಘಟನೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದೆ.
ಗ್ರಾಮದಲ್ಲಿರುವ ಕಮೀಷನ್ ಏಜೆಂಟರ ಗೋದಾಮು ಬದಲಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಮಾರಾಟಮಾಡಬೇಕು. ಎಪಿಎಂಸಿ ಅಧಿಕಾರಿಗಳು ಬಿತ್ತನೆಯಸಣ್ಣ ಈರುಳ್ಳಿಗೆ ನ್ಯಾಯವಾದ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದ ಪರಿಣಾಮ ಸರಿ ಸುಮಾರು ಅರ್ಧಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ರೈತರು, ದಳ್ಳಾಳಿಗಳ ನಡುವೆ ಮಾತಿನ ಚಕಮಕಿ: ಪ್ರತಿ ಗುರುವಾರ ತಾಲೂಕಿನ ತೆರಕಣಾಂಬಿ ಸಂತೆಯಲ್ಲಿ ತಮಿಳುನಾಡಿನಿಂದ ಬಿತ್ತನೆಯ ಸಣ್ಣ ಈರುಳ್ಳಿಯನ್ನು ತಂದು ಮಾರಾಟ ಮಾಡಲಾಗುತ್ತಿದೆ. ತಾಲೂಕಿನಲ್ಲದೆ ನೆರೆಯಹೆಗ್ಗಡದೇವನಕೋಟೆ, ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ ಹಾಗೂ ಟಿ.ನರಸೀಪುರದಿಂದಲೂ ರೈತರು ಇಲ್ಲಿ ಬಿತ್ತನೆಗಾಗಿ ಸಣ್ಣಈರುಳ್ಳಿ ಖರೀದಿಸುತ್ತಿದ್ದಾರೆ. ಕಳೆದ ಮೂರನೇ ವಾರ 100 ಕಿಲೋ ಚೀಲಕ್ಕೆ 3500 ಇದ್ದ ಬಿತ್ತನೆ ಈರುಳ್ಳಿ ಬೆಲೆ ಕಳೆದ ವಾರ 6500ಕ್ಕೆ ಏರಿತ್ತು. ಈ ಸಂದರ್ಭದಲ್ಲಿ ರೈತರು ಹಾಗೂ ದಳ್ಳಾಳಿಗಳ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತ ಮಂಡಲಿಯು ಈರುಳ್ಳಿ ಲಾರಿಗಳನ್ನುಆವರಣದ ಒಳಗೆ ಬಿಟ್ಟುಕೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದಲೂ ಗ್ರಾಮದ ದಳ್ಳಾಳಿಗಳ ಗೋದಾಮುಗಳ ಮುಂದೆ ಲಾರಿ ನಿಲ್ಲಿಸಿ, ತಮಿಳುನಾಡಿನಿಂದ ತಂದ ಸಣ್ಣ ಈರುಳ್ಳಿಯನ್ನು ವ್ಯಾಪಾರ ಮಾಡುತ್ತಿದ್ದರು. ಗುರುವಾರ 100 ಕಿ.ಲೋ. ಚೀಲಕ್ಕೆ 13 ಸಾವಿರ ರೂಪಾಯಿ ದರ ನಿಗದಿಸಿದ್ದು ರೈತರನ್ನುರೊಚ್ಚಿಗೇಳಿಸಿತು. ಈ ಸಂದರ್ಭದಲ್ಲಿ ರೈತರು ಹಾಗೂ ದಳ್ಳಾಳಿಗಳ ನಡುವೆ ಮಾತಿಗೆ ಮಾತು ಬೆಳೆದು ಎಲ್ಲಾಲಾರಿಗಳನ್ನು ಎಪಿಎಂಸಿ ಆವರಣಕ್ಕೆ ಕೊಂಡೊಯ್ದು
ನ್ಯಾಯವಾದ ಬೆಲೆ ನಿಗದಿಸಬೇಕು ಎಂದು ಪಟ್ಟು ಹಿಡಿದ ರೈತರು, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈತರು, ದಳ್ಳಾಳಿಗಳ ಸಭೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಧಾ ಅವರು ರಸ್ತೆ ತಡೆ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಂತರ ಗ್ರಾಮದ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ಕಾರ್ಯದರ್ಶಿ ನಾಗೇಂದ್ರ, ರೈತರು, ದಳ್ಳಾಳಿಗಳ ಸಭೆ ಆಯೋಜಿಸಿದರು.
ಮಧ್ಯಾಹ್ನದಿಂದ ಸಂಜೆಯವರೆಗೂ ನಡೆದ ಸಭೆಯಲ್ಲಿ ಬೆಲೆ ನಿಗದಿ, ಮಾರಾಟ ಸೇರಿದಂತೆ ರೈತರು, ವರ್ತಕರು ಹಾಗೂ ಅಧಿಕಾರಿಗಳ ನಡುವೆ ಒಮ್ಮತ ಮೂಡದೆ ಗೊಂದಲದ ಗೂಡಾಗಿ ಪರಿಣಮಿಸಿತು. ರೈತ ಮುಖಂಡ ಸಂಪತ್ತು ಹಾಗೂ ಇತರರು ರೈತರ ಉತ್ಪನ್ನಗಳ ಮಾರಾಟ ಹಾಗೂ ಖರೀದಿ ಎಪಿಎಂಸಿಯ ಹೊಣೆಯಾಗಿದ್ದರೂ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ನಂಜುಂಡಯ್ಯ ಆಗಮಿಸಿ, ಚರ್ಚಿಸಿದರೂ ಸಹ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಣ್ಣ ಈರುಳ್ಳಿ ತುಂಬಿದ್ದ ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕೊಂಡೊಯ್ದರು. ಶುಕ್ರವಾರವೂ ಈ ಬಗ್ಗೆ ಮಾತುಕತೆ ನಡೆಯಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.