ಅಡಹಳ್ಳಿ: ಸಮೀಪದ ಶೇಗುಣಸಿ ಗ್ರಾಮದ ಕೃಷ್ಣಾ ನದಿಯ ಪ್ರವಾಹ ಪೀಡಿತ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ, ಬಿದ್ದ ಮನೆ ಮತ್ತು ಬೆಳೆ ಹಾನಿ ಪರಿಹಾರ ದೊರಿತಿಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿ ಅಥಣಿ ಶಾಸಕ ಹಾಗೂ ಕೋಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರನ್ನು ಮಂಗಳವಾರ ಸಂಜೆ ಗ್ರಾಮಸ್ಥರು ಘೇರಾವ್ ಹಾಕಿದರು.
ಶೇಗುಣಸಿ ಗ್ರಾಮದಲ್ಲಿ 10-15 ಬಿದ್ದ ಮನೆಗಳಿಗೆ ಮಾತ್ರ ಪರಿಹಾರ ಬಂದಿದ್ದು, ಉಳಿದ ಮನೆಗಳನ್ನು ಪುನರ್ ಸರ್ವೇ ಮಾಡಿದರೂ ಪರಿಹಾರ ಇಲ್ಲಿವರೆಗೆ ಸಿಕ್ಕಿಲ್ಲ. ಯೋಗ್ಯ ಫಲಾನುಭವಿಗಳಿಗೆ ದೊರೆಯಬೇಕಾದ 10 ಸಾವಿರ ರೂ. ಪರಿಹಾರ ಬೇಡದ ಒಂದೇ ಕುಟುಂಬದ 5-6 ಜನರಿಗೆ ನೀಡಲಾಗಿದೆ. ಕಾಳಜಿ ಕೇಂದ್ರದಲ್ಲಿ ನಿರ್ಗತಿಕ ಸಂತ್ರಸ್ತರನ್ನು ದಾರಿ ತಪ್ಪಿಸುವ ತಂತ್ರಗಾರಿಕೆಯನ್ನು ಸರ್ಕಾರ ಜಿಲ್ಲಾಡಳಿತ ಮಾಡಿತ್ತು. ಸುಳ್ಳು ಭರವಸೆ ನೀಡಿ ಸಂತ್ರಸ್ತರಿಗೆ ಮಂಕು ಬುದ್ಧಿ ಎರಚಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೋಡಿ ಎಸಿ ಬಂದು ನಮ್ಮ ಅಹವಾಲು ಸ್ವೀಕರಿಸುತ್ತೇನೆಂದು ಹೇಳಿದರೂ ಇಲ್ಲಿಯವರೆಗೆ ಬಂದಿಲ್ಲ.
ನಿಮ್ಮ ಬಿಜೆಪಿ ಸರ್ಕಾರವಿದೆ. ನಮ್ಮ ಜನ ಪ್ರತಿನಿಧಿಗಳಾಗಿ ನಿವೇನು ಮಾಡುತ್ತಿರಿ ಎಂದು ಶಾಸಕ ಕುಠಳ್ಳಿಯವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಈ ಮೊದಲು ಬಂದ ಪರಿಹಾರ ಬಂದ್ ಮಾಡಬೇಕು. ಮರು ಬೆಳೆ ಹಾಗೂ ಬಿದ್ದ ಮನೆ ಮತ್ತು 10 ಸಾವಿರ ರೂ. ನಗದು ಪರಿಹಾರ ಪರಿಶೀಲನೆ ಮಾಡಿ ಯೋಗ್ಯ ಫಲಾನುಭವಿಗಳಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ನಂತರ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ತಾಪಂ ಇಒ ಶೇಖರ ಕರಿಬಸಪ್ಪಗೋಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಸ್ಥಳಕ್ಕೆ ಆಗಮಿಸಿದರು. ಆಗ ಅಧಿಕಾರಿಗಳಿಂದ ಮಾಹಿತಿ ಪಡೆದು ಮರು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ, ತಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಶಾಸಕ ಮಹೇಶ ಕುಮಠಳ್ಳಿಯವರು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಸುರೇಶಗೌಡ ಪಾಟೀಲ, ಅಶೋಕ ಗೌಡಪ್ಪನವರ, ಭರಮು ಚೌಗಲಾ, ಶಂಕರ ದೊಡ್ಡಶಿವಣ್ಣವರ, ಚಿದಾನಂದ ಗೌಡಪ್ಪನವರ, ರವಿ ಕಾಂಬಳೆ, ಗಜು ಮೋಕರ, ಸದೀರ ಮನಗೂಳಿ, ಶಿವಲಿಂಗಯ್ಯ ಗುರುಸ್ವಾಮಿ ಸೇರಿದಂತೆ ಹಲವರು ಇದ್ದರು.