ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಭಾರೀ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 173ರ ಕಡೂರು-ಚಿಕ್ಕಮಗಳೂರು ರಸ್ತೆಯ ನಗರದ ಎಐಟಿ ವೃತ್ತದ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಬೇಡಿಕೆ ಈಡೇರಿಸಿ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ, ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ಕಾಯಿದೆ ತಿದ್ದುಪಡಿ ವಾಪಸ್ ಪಡೆಯುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಸೂಕ್ತ ಪರಿಹಾರ ನೀಡಿ: 2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದಿದೆ. ಇದರ ಪ್ರಕಾರ ರೈತರ ಒಪ್ಪಿಗೆ ಇಲ್ಲದೇ ಯಾವುದೇ ಕಾರಣಕ್ಕೂ ಭೂಸ್ವಾಧೀನ ಪಡಿಸಿಕೊಳ್ಳುವಂತಿಲ್ಲ.ರೈತರಿಗೆ ಕೊಡುವ ಪರಿಹಾರ ಮಾರುಕಟ್ಟೆ ದರದ 4 ಪಟ್ಟು ಹೆಚ್ಚಾಗಿರಬೇಕು. ನಗರ ಪ್ರದೇಶವಾದರೆ 2 ಪಟ್ಟು ನೀಡಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು 5 ವರ್ಷದೊಳಗೆ ಉದ್ದೇಶಿತ ಯೋಜನೆಗೆ ಬಳಕೆ ಮಾಡಬೇಕು. ಇಲ್ಲದಿದ್ದರೆ ಆ ಭೂಮಿಯನ್ನು ಮೂಲ ರೈತನಿಗೆ ಬಿಟ್ಟುಕೊಡಬೇಕು ಹಾಗೂ ಭೂಸ್ವಾಧೀನ ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗಿರಬೇಕು ಎಂದು ಆ ಕಾಯಿದೆ ಹೇಳಿದೆ ಎಂದರು.
ತಿದ್ದುಪಡಿ ವಾಪಸ್‌ಗೆ ಆಗ್ರಹ: ಭೂಸ್ವಾಧೀನ ಕಾಯಿದೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಆದರೆ, ರಾಜ್ಯ ಮೈತ್ರಿ ಸರ್ಕಾರ ಈ ಕಾಯಿದೆಗೆ ಮತ್ತೆ ತಿದ್ದುಪಡಿ ತರಲು ಮುಂದಾಗಿದೆ. ಒಂದು ವೇಳೆ ತಿದ್ದುಪಡಿಯಾದಲ್ಲಿ ಮೇಲಿನ ಎಲ್ಲಾ ಅಂಶಗಳನ್ನು ಜಿಲ್ಲಾಧಿಕಾರಿ ವಿವೇಚನೆಗೆ ಬಿಡಲಾಗುತ್ತದೆ. ಈ ರೀತಿ ತಿದ್ದುಪಡಿಗೆ ಮುಂದಾಗಿರುವುದು ರಾಜ್ಯದ ರೈತ ಸಮುದಾಯಕ್ಕೆ ದ್ರೋಹ ಬಗೆದಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಭೂಸ್ವಾಧೀನ ಕಾಯಿದೆಗೆ ತಂದಿರುವ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಮರ್ಪಕ ವಿದ್ಯುತ್ ಪೂರೈಸಿ: ಗ್ರಾಮೀಣ ಪ್ರದೇಶಕ್ಕೆ ಅಗತ್ಯವಾಗಿ ಬೇಕಿರುವ ವಿದ್ಯುತ್ ಅನ್ನು ಸರಬರಾಜು ಮಾಡುವಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ವಿಫಲವಾಗಿವೆ. ತ್ರಿಪೇಸ್ ವಿದ್ಯುತ್ ಅನ್ನು ಕೆಲವೇ ಗಂಟೆ ನೀಡುತ್ತಿದ್ದುದರಿಂದ ಕುಡಿಯುವ ನೀರು ಸೇರಿದಂತೆ ರೈತರ ಹೊಲಗದ್ದೆಗಳಿಗೆ ತೀವ್ರ ತೊಂದರೆಯಾಗಿದೆ. ವಿದ್ಯುತ್ ಏರಿಳಿತದಿಂದ ರೈತರ ಉಪಕರಣಗಳು ಸುಟ್ಟು ನಷ್ಟ ಉಂಟಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸುವ ಯೋಜನೆ ಯನ್ನು ಜಾರಿಗೆ ತರಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ, ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್, ಕೆ.ನಾಗರಾಜ್, ಮಂಜೇಗೌಡ, ನಿರಂಜನ ಮೂರ್ತಿ ಮತ್ತಿತರರು ನೇತೃತ್ವ ವಹಿಸಿದ್ದರು.