Advertisement

ಡಿ. 21 ರಿಂದ ರಸ್ತೆ ಸುರಕ್ಷತಾ ಸಪ್ತಾಹ: ಜಿಲ್ಲಾಧಿಕಾರಿ ಹಿರೇಮಠ

01:36 PM Dec 09, 2020 | sudhir |

ಬೆಳಗಾವಿ: ರಸ್ತೆ ಬಳಕೆದಾರರಲ್ಲಿ ಹಾಗೂ ವಾಹನ ಚಾಲಕರಲ್ಲಿ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಹಾವೇರಿ ಜಿಲ್ಲೆ ಗೋಟಗೋಡಿಯ ಕನ್ನಡ ಜಾನಪದ ವಿಶ್ವವಿದ್ಯಾಲಯ ಸಹಯೋಗದಲ್ಲಿ ಡಿ. 21ರಿಂದ ರಸ್ತೆ ಸುರಕ್ಷತಾ ಸಪ್ತಾಹ
ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಲ್ಲ ಇಲಾಖೆಯ ಸಹಕಾರದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಯಶಸ್ವಿಗೊಳಿಸಲು
ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದ
ಕನ್ನಡ ಜಾನಪದ ವಿವಿ ಹಲವಾರು ರೀತಿಯಲ್ಲಿ ಇಂತಹ ಉತ್ತಮ ಕೆಲಸಗಳನ್ನು ಮಾಡುತ್ತಿದ್ದು, ಅವರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಇದನ್ನೂ ಓದಿ:ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಚಿವ ಬಿ.ಎ.ಜೀವಿಜಯ

ರಸ್ತೆ ಸುರಕ್ಷತಾ ಸಪ್ತಾಹದ ಪ್ರಮುಖ ಉದ್ದೇಶಗಳ ಕುರಿತು ವಿವರಣೆ ನೀಡಿದ ಅಭಿವೃದ್ಧಿ ತಜ್ಞ ಪ್ರಕಾಶ ಭಟ್‌ ಅವರು, ರಸ್ತೆ ಬಳಕೆದಾರರಲ್ಲಿ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸುವುದು, ವಾಣಿಜ್ಯ ವಾಹನಗಳ ಚಾಲಕರಿಗೆ ಕಣ್ಣಿನ ಪರೀಕ್ಷೆ ನಡೆಸುವುದು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸುವುದಾಗಿದೆ ಎಂದು ತಿಳಿಸಿದರು.

Advertisement

ರಸ್ತೆ ಜಾಗೃತಿಯ ಬಗ್ಗೆ ಚಿತ್ರಕಲೆಗಳ ಮೂಲಕ ಅರಿವು ಮೂಡಿಸುವುದು: ಬೀದಿನಾಟಕಗಳು, ಜಾಥಾ, ಗೋಡೆಗಳ ಮೇಲೆ ಚಿತ್ರಕಲೆ ಬರೆಸಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಎಲ್‌ಇಡಿ ಫಲಕಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ
ಮೂಡಿಸುವುದು, ಹಲವಾರು ಘೋಷ ವಾಕ್ಯಗಳನ್ನು ಬಳಸುವುದು ಹಾಗೂ ವೇಣುಧ್ವನಿ ರೇಡಿಯೋ ಕಾರ್ಯಕ್ರಮಗಳನ್ನು ನಡೆಸುವುದು, ಸ್ಥಳೀಯ ಪತ್ರಿಕೆಗಳ ಮೂಲಕ ಜನರಿಗೆ ಇದರ ಉದ್ದೇಶವನ್ನು ತಲುಪಿಸುವ ಕಾರ್ಯವನ್ನು ಮಾಡುವುದಾಗಿ
ಹೇಳಿದರು.

ಜಾಥಾಕ್ಕೆ ಚಾಲನೆ: ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭ ಡಿ. 21ರಂದು ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ನಡೆಯಲಿದೆ ಎಂದು ಹಿರೇಮಠ ತಿಳಿಸಿದರು.

ಚೆನ್ನಮ್ಮ ವೃತ್ತದಿಂದ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಜಾಥಾ ನಡೆಸಲಾಗುವುದು ಎಂದು ವಿವರಿಸಿದರು.

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ಡಿಸಿಪಿ ಚಂದ್ರಶೇಖರ ನೀಲಗಾರ, ಹಾವೇರಿ ಜಿಲ್ಲೆ ಗೋಟಗೋಡಿಯ ಕನ್ನಡ ಜಾನಪದ ವಿವಿ ಅಧ್ಯಕ್ಷೆ ವೇದಾರಾಣಿ ದಾಸನೂರ, ಕನ್ನಡ ಜನಪದ ವಿವಿ ಸದಸ್ಯರಾದ ಪ್ರಕಾಶ ದಾಸನೂರ ಹಾಗೂ
ಕಾರ್ಯಕ್ರಮ ಸಂಯೋಜಕರಾದ ಪ್ರದೀಪ ಮೇಲ್ಗಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next