ಚಿಕ್ಕೋಡಿ: ನಿಪ್ಪಾಣಿ ಪಟ್ಟಣದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಶನಿವಾರ ಲಾರಿ ಮತ್ತು ಕಾರಿನ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಪಕ್ಕದ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಮುರುಗೋಡ ನಗರದ ನಿವಾಸಿಗಳಾದ ತಿಲಾವರ ಬಾಬುಸಾಬ ಜಮಾದಾರ (64), ರೇಹನಾ ತಿಲಾವರ ಜಮಾದಾರ(58), ಜುನೇದಖಾನ ತಿಲಾವರ ಜಮಾದಾರ (29), ಅಪರೀನಾ ಮೋಸಿನ್ ಜಮಾದಾರ, ಅಯಾನ್ ಮೋಸಿನ ಜಮಾದಾರ (7), ಡಾ.ಮೋಸಿನ ದಿಲಾವರ ಜಮಾದಾರ(35) ಎಂದು ಗುರುತಿಸಲಾಗಿದೆ.
ಬೆಳಗಾವಿ ಕಡೆಯಿಂದ ಕೊಲ್ಲಾಪುರ ಕಡೆಗೆ ಹೋಗುತ್ತಿದ್ದ ಲಾರಿ ನಿಪ್ಪಾಣಿ ಸ್ಥವನಿ ಘಾಟ್ದಲ್ಲಿ ಬ್ರೇಕ್ ಫೇಲಾಗಿ ಸರ್ವಿಸ್ ರಸ್ತೆ ಮೂಲಕ ಬೆಳಗಾವಿ ಕಡೆಗೆ ಹೋಗುತ್ತಿದ್ದ ವ್ಯಾಗನಾರ್ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಜುನೇದಖಾನ್ ಜಮಾದಾರ ಪತ್ನಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ಹೆರಿಗೆಯಾಗಿದ್ದು ಎಲ್ಲರೂ ಕುಟುಂಬ ಸಮೇತರಾಗಿ ಭಾನುವಾರ ನಡೆಯುವ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸುಧಿಧೀರಕುಮಾರ ರೆಡ್ಡಿ, ಸಿಪಿಐ ಕಿಶೋರ ಭರಣಿ ಮತ್ತು ಶಹರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.