Advertisement

ರಸ್ತೆ ಅಪಘಾತ ಪ್ರಕರಣ: 10 ತಿಂಗಳುಗಳಲ್ಲಿ 43 ಸಾವು

12:33 PM Feb 10, 2021 | Team Udayavani |

ಪುತ್ತೂರು: ಸುಳ್ಯ-ಪುತ್ತೂರು ತಾಲೂಕಿನಲ್ಲಿ 10 ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 43 ಮಂದಿ ಜೀವ ತೆತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಯಿಂದಲೇ ಈ ಸಾವು ಸಂಭವಿಸಿದೆ. ಆತಂಕದ ಸಂಗತಿ ಅಂದರೆ, ಮಹಾಮಾರಿ ಕೋವಿಡ್‌ ಸಾವಿನ ಪ್ರಮಾಣಕ್ಕಿಂತಲೂ ಅಪಘಾತದಿಂದ ಉಂಟಾದ ಸಾವಿನ ಸಂಖ್ಯೆ ಹೆಚ್ಚಾಗಿದೆ.

Advertisement

ಯುವಕರೇ ಅಧಿಕ :

ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ ಹತ್ತು ತಿಂಗಳುಗಳಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ 238 ಅಪಘಾತ ಪ್ರಕರಣ ಸಂಭವಿಸಿದೆ. ಇದರಲ್ಲಿ 43 ಮಂದಿ ಜೀವ ಕಳೆದುಕೊಂಡಿದ್ದಾರೆ. ಮೃತರ ಪೈಕಿ 32 ಮಂದಿ 30 ವರ್ಷ ಒಳಗಿನ ಯುವಕರು. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶೇ. 60ರಷ್ಟು ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದು, ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕು ಅನ್ನುತ್ತಿದೆ ಚಿತ್ರಣ.

ಅತೀ ವೇಗ ಕಾರಣ ;

ಅಪಘಾತಕ್ಕೆ ಮುಖ್ಯವಾಗಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಕಾರಣ. ತಿರುವು ರಸ್ತೆಯಲ್ಲಿ ಓವರ್‌ಟೇಕ್‌, ರಸ್ತೆ ನಡು ಭಾಗದಲ್ಲಿ ಸಂಚಾರ, ಹೆಲ್ಮೆಟ್‌-ಸೀಟ್‌ ಬೆಲ್ಟ್ ರಹಿತ ಸಂಚಾರ, ಮೊಬೈಲ್‌ ಬಳಕೆ ಮಾಡುತ್ತಲೇ ಚಾಲನೆ, ಮದ್ಯಪಾನ ಸೇವಿಸಿ ಚಾಲನೆ, ಸಿಂಗಲ್‌ ಹೆಡ್‌ಲೈಟ್‌ ಬಳಕೆ, ಓವರ್‌ ಲೋಡ್‌ ಹೀಗೆ ಹಲವು ಕಾರಣಗಳಿಂದ ಅಪಘಾತ ಸಂಭವಿಸಿ ಜೀವ ಹಾನಿಯಾಗುತ್ತಿದೆ ಎನ್ನುತ್ತಿದೆ ವರದಿ. ಶೇ. 2ರಿಂದ 5ರಷ್ಟು ರಸ್ತೆ ವಿನ್ಯಾಸದಿಂದ ಅಪಘಾತ ಉಂಟಾದ ಬಗ್ಗೆ ಉಲ್ಲೇಖೀಸಲಾಗಿದೆ.

Advertisement

ನಿಯಂತ್ರಣ ಸಾಧನಗಳಿಗೆ ಢಿಕ್ಕಿ :

ಅಪಘಾತ ಸಂಭವಿಸಿದ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಂಡರೂ ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡೆದ ಘಟನೆಗಳಿವೆ. ಅತಿ ವೇಗವಾಗಿ ವಾಹನ ಚಲಾಯಿಸುವವರಿಗೆ ನಿಯಂತ್ರಣ ಸಾಧನದ ಬಗ್ಗೆ ಅರಿವಿರುವುದಿಲ್ಲ. ವಾಹನ ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ರಾತ್ರಿ ವೇಳೆ ಬ್ಯಾರಿಕೇಡ್‌ ತೆರವು ಮಾಡುತ್ತಿದೆ. ಹಲವೆಡೆ ಹಂಪ್‌ ಹಾಕಿದ್ದರೂ, ವೇಗಕ್ಕೆ ಮಿತಿವೊಡ್ಡಲು ಶಕ್ತವಾಗಿಲ್ಲ.

18 ಲಕ್ಷ ರೂ.ದಂಡ ಸಂಗ್ರಹ :

ಪುತ್ತೂರು, ಸುಳ್ಯ, ಬೆಳ್ತಂಗಡಿ ವ್ಯಾಪ್ತಿಯಲ್ಲಿ ಹೆಲ್ಮೆಟ್‌-ಸೀಟ್‌ ಬೆಲ್ಟ್ ರಹಿತ ಸಂಚಾರ, ಮೊಬೈಲ್‌ ಬಳಕೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರ್‌ಟಿಒ ಒಂದು ವರ್ಷದಲ್ಲಿ 1, 700 ಪ್ರಕರಣ ದಾಖಲಿಸಿಕೊಂಡಿದೆ. 18 ಲಕ್ಷ ರೂ. ದಂಡ ಮೊತ್ತ ಸಂಗ್ರಹಿಸಿದೆ. ಕೋವಿಡ್‌ ಲಾಕ್‌ಡೌನ್‌ ಮುಕ್ತಾಯಗೊಂಡ ಅನಂತರ ವಾಹನ ಓಡಾಟ ಹೆಚ್ಚಾಗಿ ಅಪಘಾತ ಪ್ರಮಾಣ ಏರಿಕೆಯತ್ತಲೇ ಸಾಗಿದೆ.

ಸಂಚಾರ ಠಾಣೆ ಇಲ್ಲ : ಸಂಪಾಜೆ-ಮಾಣಿ ತನಕದ ವ್ಯಾಪ್ತಿಯಲ್ಲಿ ಪುತ್ತೂರು ನಗರದಲ್ಲಿ ಮಾತ್ರ ಸಂಚಾರ ಠಾಣೆ ಇದೆ. ಸುಳ್ಯ ತಾಲೂಕಿನಲ್ಲಿ ಸಂಚಾರ ಠಾಣೆ ಇಲ್ಲ. ಹೀಗಾಗಿ ಅಪಘಾತ ಸಂದರ್ಭ ತತ್‌ಕ್ಷಣ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗುತ್ತಿದೆ. ಹಲವು ವರ್ಷಗಳ ಹಿಂದೆಯೇ ಸುಳ್ಯಕ್ಕೆ ಸಂಚಾರ ಠಾಣೆಗೆ ಬೇಡಿಕೆ ಸಲ್ಲಿಸಿದ್ದರೂ ಅದು ಈ ತನಕ ಈಡೇರಿಲ್ಲ. ಕಳೆದ ವರ್ಷ ಕೇವಲ ಮೂರು ತಿಂಗಳಲ್ಲಿ ಸುಳ್ಯ ವ್ಯಾಪ್ತಿಯಲ್ಲಿ 12ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಜೀವ ತೆತ್ತಿದ್ದಾರೆ. ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಒಂದು ತಿಂಗಳಲ್ಲಿ ನಾಲ್ಕು ಅಪಘಾತ ಸಂಭವಿಸಿ ಒಟ್ಟು 7 ಮಂದಿ ಮೃತಪಟ್ಟ ಘಟನೆ ನಡೆದಿತ್ತು.

ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವ ಕಾರಣ ರಸ್ತೆ ಅಪಘಾತ ಸಂಭವಿಸುತ್ತಿದೆ. ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ. ಇದು ಆತಂಕಕಾರಿ ಸಂಗತಿ. ಹೀಗಾಗಿ ಪ್ರತಿ ಶಾಲಾ, ಕಾಲೇಜುಗಳಿಗೆ ತೆರಳಿ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ.  -ಸಂಜೀವ ಮಠಂದೂರು, ಶಾಸಕರು

ಶೇ. 95ಕ್ಕೂ ಅಧಿಕ ಅಪಘಾತ ಪ್ರಕರಣಕ್ಕೆ ಅಜಾಗರೂಕತೆಯ ಚಾಲನೆ ಕಾರಣ. ಹತ್ತು ತಿಂಗಳಲ್ಲಿ ಉಭಯ ತಾಲೂಕಿನಲ್ಲಿ 43 ಮಂದಿ ಸಾವನ್ನಪ್ಪಿದ್ದು, ಅತಿ ವೇಗ, ಹೆಲ್ಮೆಟ್‌-ಸೀಟ್‌ ಬೆಲ್ಟ್ ರಹಿತ ಚಾಲನೆ ಇದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಆಚರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. -ಆನಂದ ಗೌಡ,  ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು

 

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next