Advertisement

ದೇವರ ಮೊರೆ ಹೋದರೂ ಬದುಕಲಿಲ್ಲ ಪರಮೇಶ್ವರ

03:00 PM Sep 02, 2022 | Team Udayavani |

ಅಫಜಲಪುರ: ಸರ್ಕಾರದ ಯೋಜನೆಗಳನ್ನೆಲ್ಲ ಫಲಾನುಭವಿಗಳಿಗೆ ಮುಟ್ಟಿಸಲು ಯತ್ನಿಸುತ್ತಿದ್ದ ಗ್ರಾಪಂ ಸದಸ್ಯರೊಬ್ಬರು ಸಾವು- ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಗ ಅವರು ಚೇತರಿಸಿಕೊಳ್ಳಲು ಗ್ರಾಮಸ್ಥರೆಲ್ಲ ಸೇರಿ ಸುಮಾರು ಐದು ಕಿ.ಮೀ ವರೆಗೂ ವಿವಿಧ ದೇವರುಗಳ ಮೊರೆ ಹೋಗಿ ಪಾದಯಾತ್ರೆ ಮಾಡಿ, ದೀಡ್‌ ನಮಸ್ಕಾರ ಹಾಕಿದರೂ ಆತನ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Advertisement

ಮಣೂರ ಗ್ರಾಪಂ ವ್ಯಾಪ್ತಿಯಲ್ಲಿರುವ ಶೇಷಗಿರಿ ವಾಡಿಯ ಸದಸ್ಯ ಪರಮೇಶ್ವರ ವಳಸಂಗ (38) ಎನ್ನುವರಿಗೆ ರಸ್ತೆ ಅಪಘಾತವಾಗಿ ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಗ್ರಾಮಸ್ಥರೆಲ್ಲ ಆತ ಬೇಗ ಗುಣಮುಖರಾಗಲಿ ಎಂದು ಶೇಷಗಿರಿಯಿಂದ-ಮಣೂರ ಗ್ರಾಮದವರೆಗೆ ಎಲ್ಲ ದೇವರಿಗೂ ಹರಕೆ ಹೊತ್ತು ದೀಡ್‌ ನಮಸ್ಕಾರ ಹಾಕಿದ್ದರು. ಮೃತರಿಗೆ ತಂದೆ, ಪತ್ನಿ, ಮೂವರು ಪುತ್ರರು, ಇಬ್ಬರು ತಮ್ಮಂದಿರು ಇದ್ದಾರೆ. ಈತ ಮಣೂರ ಗ್ರಾಪಂ ವ್ಯಾಪ್ತಿಯ ಶೇಷಗಿರಿವಾಡಿ ಗ್ರಾಮದಿಂದ ಎರಡು ಸಲ ಅವಿರೋಧ, ಒಂದು ಬಾರಿ ಚುನಾವಣೆ ಮುಖಾಂತರ ಗೆದ್ದು ಸತತ ಮೂರು ಸಲ ಗ್ರಾಪಂಗೆ ಆಯ್ಕೆಯಾಗಿದ್ದರು. ಸದಾ ಜನರ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದ ಪರಮೇಶ್ವರ ಎಲ್ಲರಿಗೂ ಮನೆ ಮಗನಂತೆ ಆಗಿದ್ದರು.

ಚಿಕಿತ್ಸೆ ಫಲಿಸದೆ ಸಾವು: ಪರಮೇಶ್ವರ ಕಳೆದ ಆ.26ರಂದು ಸಂಜೆ ಮಣೂರ ಗ್ರಾಮದಿಂದ ಸ್ವಗ್ರಾಮ ಶೇಷಗಿರಿವಾಡಿಗೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಿಂದ ಬಿದ್ದು ಬಲವಾಗಿ ಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕಾರಣ ಆ.31ರಂದು ಮೃತಪಟ್ಟಿದ್ದಾರೆ.

ಪರಮೇಶ್ವರ ನಿಧನಕ್ಕೆ ಮಣೂರ, ಶೇಷಗಿರಿ ವಾಡಿ, ರಾಮನಗರ, ಹೊಸೂರ, ಕೂಡಿಗನೂರ, ಶಿವಬಾಳ ನಗರ ಬಾಬಾ ನಗರ, ದ್ಯಾವಪ್ಪ ನಗರ, ಉಪ್ಪರವಾಡಿ ಗ್ರಾಮಸ್ಥರು, ಸದಸ್ಯರು ಸೇರಿದಂತೆ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ ಕಂಬನಿ ಮಿಡಿದಿದ್ದಾರೆ. ಶೇಷಗಿರಿ ವಾಡಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರೆಲ್ಲ ಸೇರಿ ಗ್ರಾಮಕ್ಕೆ ಮೃತದೇಹವನ್ನು ತಂದು ಅಂತ್ಯಕ್ರಿಯೆ ಮಾಡಿದ್ದಾರೆ.

ಎಲ್ಲ ದೇವರುಗಳಿಗೂ ನೀರು

Advertisement

ಪರಮೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಶೇಷಗಿರಿ ಗ್ರಾಮಸ್ಥರು ಶೇಷಗಿರಿಯಿಂದ-ಮಣೂರ ಗ್ರಾಮದವರೆಗೆ 5 ಕಿಮೀವರೆಗೆ ದೀಡ್‌ ನಮಸ್ಕಾರ, ಕುಂಭ ಕಳಶಗಳೊಂದಿಗೆ ಪಾದಯಾತ್ರೆ ಮಾಡಿ ಮಣೂರ ಗ್ರಾಮದಲ್ಲಿರುವ ಯಲ್ಲಮ್ಮ ದೇವಿ ಸೇರಿದಂತೆ ಎಲ್ಲ ದೇವರುಗಳಿಗೆ ನೀರು ಹಾಕಿ ಪರಮೇಶ್ವರ ವಳಸಂಗ ಬದುಕಿ ಬರಲಿ ಎಂದು ಹರಕೆ ಕಟ್ಟಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next