ಉಪ್ಪಿನಂಗಡಿ/ನೆಲ್ಯಾಡಿ: ಧರ್ಮಸ್ಥಳದಲ್ಲಿ ದೇವರ ದರ್ಶನವನ್ನು ಮುಗಿಸಿಕೊಂಡು ತಮ್ಮೂರಿಗೆ ವಾಪಸಾಗುತ್ತಿದ್ದ ಯಾತ್ರಿಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಬ್ಬಿಣದ ಪೈಪ್ ತುಂಬಿಕೊಂಡಿದ್ದ ಲಾರಿಯೊಂದು ಉರುಳಿಬಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಲಾರಿ ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐದು ಜನರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಪರವರ ಕೊಟ್ಯ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮಂಡ್ಯ ಮೂಲದ ನಾರಾಯಣ ರಾವ್ (60), ಅವರ ಪುತ್ರಿ ನೀತು (35) ಮತ್ತು ಮೊಮ್ಮಗಳು ನಿಧಿ (15) ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಹಾಗೂ ಕಾವೇರಿ ಎಂಬವರು ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ನೆಲ್ಯಾಡಿ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆಯಲು ಸ್ಥಳೀಯರು ಸಾಕಷ್ಟು ಶ್ರಮಪಡಬೇಕಾಯಿತು. ಘಟನೆಯ ಕುರಿತಾದಂತೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.