ಬೆಂಗಳೂರು: ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ಮೇಲ್ಸೇತುವೆಯ ತಡೆಗೋಡೆಗೆ ಆಯ ತಪ್ಪಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೇಲ್ಸೇತುವೆಯಿಂದ 10 ಅಡಿ ಕೆಳಗೆ ಬಿದ್ದು ಟೆಕಿ ಮೃತಪಟ್ಟರೆ, ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪ್ರಮೋದನಗರ ನಿವಾಸಿ ರಾಮ್‌ಕುಮಾರ್(29) ಮೃತ ಹಿಂಬದಿ ಸವಾರ. ಸವಾರ ಯಶವಂತ್ (22) ಗಂಭೀರವಾಗಿ ಗಾಯಗೊಂಡವ.
ರಾಮ್‌ಕುಮಾರ್ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ಯಶವಂತ್‌ನ ಅಕ್ಕನನ್ನು ವಿವಾಹವಾಗಿದ್ದರು. ಶನಿವಾರ ತಡರಾತ್ರಿ 12.30ಕ್ಕೆ ಪ್ರಮೋದನಗರದಿಂದ ಜೆ.ಪಿ.ನಗರಕ್ಕೆ ಟೀ ಕುಡಿಯಲು ಯಶವಂತ್ ಹಾಗೂ ರಾಮ್‌ಕುಮಾರ್ ಇಬ್ಬರು ಸ್ನೇಹಿತರ ಜತೆಗೆ ಎರಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಯಶವಂತ್ ತನ್ನ ಪಲ್ಸರ್ ಬೈಕ್‌ನಲ್ಲಿ ರಾಮ್‌ಕುಮಾರ್‌ನನ್ನು ಕೂರಿಸಿಕೊಂಡು ಹೋಗುತ್ತಿದ್ದರೆ ಇವರ ಸ್ನೇಹಿತರಿಬ್ಬರು ಮತ್ತೂಂದು ಬೈಕ್‌ನಲ್ಲಿ ಹೋಗುತ್ತಿದ್ದರು. ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ಮೇಲ್ಸೇತುವೆಯ ಡೌನ್ ರ್‍ಯಾಂಪ್‌ನಲ್ಲಿ ಯಶವಂತ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮೇಲ್ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ರಾಮ್‌ಕುಮಾರ್ ಮೇಲ್ಸೇತುವೆಯಿಂದ 10 ಅಡಿಯಲ್ಲಿರುವ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಯಶವಂತ್ ಮೇಲ್ಸೇತುವೆ ಯಲ್ಲೇ ಬಿದ್ದು ಒದ್ದಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ರಕ್ತಸ್ರಾವಾಗಿದ್ದ ಹಿನ್ನೆಲೆಯಲ್ಲಿ ರಾಮ್‌ಕುಮಾರ್ ಭಾನುವಾರ ಮುಂಜಾನೆ 2.30ಕ್ಕೆ ಮೃತಪಟ್ಟಿದ್ದಾರೆ. ಈತ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ತಿಳಿದು ಬಂದಿದೆ.
ಯಶವಂತ್ ಕೈಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ವೇಳೆ ಮೇಲ್ಸೇತುವೆಯಲ್ಲಿ ಸಂಚಾರ ವಿರಳವಾಗಿದ್ದರೂ ಎಚ್ಚರವಹಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
120 ಕಿ.ಮೀ. ವೇಗದಲ್ಲಿ ಚಾಲನೆ!: ರಸ್ತೆ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಗಿದ್ದು, ಅಪಘಾತಕ್ಕೊಳಗಾದ ಬೈಕ್ ಸವಾರ ಯಶವಂತ್ 120 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವಿಚಾರ ಮೇಲ್ನೋಟಕ್ಕೆ ಕಂಡು ಬಂದಿದೆ. ಅಪಘಾತ ನಡೆದ ಸ್ಥಳದಲ್ಲಿ ಒಂದು ಹೆಲ್ಮೆಟ್ ಪತ್ತೆಯಾಗಿದ್ದು, ಇದೂ ಹಾಫ್ ಹೆಲ್ಮೆಟ್ ಆಗಿದೆ. ಹಿಂಬದಿ ಸವಾರ ರಾಮ್ ಕುಮಾರ್ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಗಂಭೀರವಾಗಿ ಪೆಟ್ಟು ಬೀಳುತ್ತಿರಲಿಲ್ಲ. ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಕಂಡು ಬಂದಿದೆ. ಕುಡಿದು ವಾಹನ ಚಲಾಯಿಸಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.