ಹುಣಸೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದ ಜಲೇಂದ್ರ(40) ಹಾಗೂ ಇವರ ಚಿಕ್ಕಪ್ಪನ ಮಗ ಅವಿವಾಹಿತ ಚೇತನ್ (22) ಮೃತಪಟ್ಟ ದುರ್ದೈವಿಗಳು.
ಘಟನೆ ವಿವರ: ಶನಿವಾರ ಸಂಜೆ 3 ಗಂಟೆ ಸಮಯದಲ್ಲಿ ಜಮೀನು ಉಳುಮೆ ಮಾಡಲು ತಮ್ಮ ಟ್ರ್ಯಾಕ್ಟರ್ನಲ್ಲಿ ಹಾರಂಗಿ ನಾಲೆಯ ಏರಿ ಮೇಲೆ ಮೂವರು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ನಾಲೆಯೊಳಕ್ಕೆ ಚಕ್ರ ಇಳಿದು ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಬಿದ್ದ ಪರಿಣಾಮ ಗಿರೀಶ್ ಎಂಬಾತ ಟ್ರ್ಯಾಕ್ಟರ್ನಿಂದ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರೆ, ಜಲೇಂದ್ರ ಹಾಗೂ ಚೇತನ್ ಟ್ಯಾಕ್ಟರ್ನ ಇಂಜಿನ್ ಮತ್ತು ಸ್ಟೇರಿಂಗ್ ಎದೆ ಮೇಲೆ ಬಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಗ್ರಾಮಸ್ಥರು ಬಂದು ಟ್ರಾಕ್ಟರ್ ಮೇಲೆತ್ತಲು ಯತ್ನಿಸಿದ ವೇಳೆ ಡೀಸೆಲ್ ಹೊರಚೆಲ್ಲಿ ಬೆಂಕಿ ಹತ್ತಿಕೊಂಡು ಟ್ಯ್ರಾಕ್ಟರ್ ಬಹುತೇಕ ಸುಟ್ಟು ಹೋಗಿದೆ.
ಮೃತ ಜಲೇಂದ್ರ ವಿವಾಹವಾಗಿದ್ದು ಪತ್ನಿ, ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮತ್ತೊಬ್ಬ ಯುವಕ ಚೇತನ್ ಅವಿವಾಹಿತ.
ಇದನ್ನೂ ಓದಿ:ಹುಬ್ಬಳ್ಳಿ: ನಿಯಂತ್ರಣ ತಪ್ಪಿ ಅಂಗಡಿ, ಲೈಟ್ ಕಂಬಕ್ಕೆ ಢಿಕ್ಕಿಯಾದ ಬಸ್
ಮುಗಿಲು ಮುಟ್ಟಿದ ಆಕ್ರಂದನ: ಮೃತಪಟ್ಟ ಇಬ್ಬರ ಯುವಕರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತು.
ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಿ.ವಿ.ರವಿ, ಎಸ್.ಐ.ಜಮೀರ್ ಅಹಮದ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ಶಾಸಕ ಎಚ್.ಪಿ.ಮಂಜುನಾಥ್ ಧಾವಿಸಿ ಕುಟುಂಬದವರಿಗೆ ಸಾಂತ್ವಾನ ಹೇಳಿ, ಸರಕಾರದ ಸಿಗುವ ಸೌಲಭ್ಯ ಕೊಡಿಸುವುದಾಗಿ ಭರವಸೆ ಇತ್ತರು.